ಮೇಕೆದಾಟು ಬಗ್ಗೆ ತಮಿಳುನಾಡು ತೆಗೆದುಕೊಂಡಿರುವ ನಿರ್ಣಯಕ್ಕೆ ಬೆಲೆಯಿಲ್ಲ

ಬೆಂಗಳೂರು: ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಯಾವುದೇ ಬೆಲೆಯಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾದ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಯೋಜನೆ ಬಗ್ಗೆ ಈಗಾಗಲೇ ಸರ್ವ ಪಕ್ಷದಲ್ಲಿ ಏನು ತೀರ್ಮಾನವಾಗಿದೆಯೋ ಅದೇ ರೀತಿ ಸರ್ಕಾರ ನಡೆದುಕೊಳ್ಳಲಿದೆ. ತಮಿಳುನಾಡು ಸರ್ಕಾರದ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ ಎಂದರು.

ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವರು ಹೀಗೆಯೇ ಮಾಡುತ್ತಾ ಬಂದಿದ್ದಾರೆ. ಕಾವೇರಿ ನ್ಯಾಯಾಧಿಕರಣದ ಮೂಲಕ ನೀರು ಹಂಚಿಕೆಯಾಗುತ್ತಿದೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ನದಿ ಹುಟ್ಟುತ್ತದೆ. ಕುಡಿಯುವ ನೀರಿಗೆ ನಮಗೇ ತಕರಾರು ಮಾಡುತ್ತಿದ್ದಾರೆ. ನಾವು ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಂಡೆವು. ಅದಕ್ಕೆ ಅವರು ಹಾಗೆ ಮಾಡಿದ್ದಾರೆ. ಇದು ರಾಜಕೀಯ ಸ್ಟಂಟ್ ಅಷ್ಟೇ ಎಂದು ಹೇಳಿದರು.

ನಾವು ಸರ್ವಪಕ್ಷ ಸಭೆಯಲ್ಲಿ ಏನು ನಿರ್ಧಾರ ಮಾಡಿದ್ದೆವೊ ಅದಕ್ಕೆ ಬದ್ದರಾಗಿದ್ದೇವೆ. ಡಿಪಿಆರ್‍ನಿಂದ ಎಲ್ಲವನ್ನೂ ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.