ಜಾತ್ರೆಯಲ್ಲಿ ಸಿದ್ದು ಸಕತ್ ಸ್ಟೆಪ್

ಮೈಸೂರು: ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದಲ್ಲಿ ನಡೆದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಅಲ್ಲದೆ ಸ್ಟೆಪ್ಸ್ ಕೂಡಾ ಹಾಕಿ ರಂಜಿಸಿದ್ದಾರೆ.

ಐದು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆ ಹಬ್ಬದಲ್ಲಿ ಸಿದ್ದರಾಮಯ್ಯ  ಪಾಲ್ಗೊಂಡ ಶ್ರೀ ಸಿದ್ದರಾಮೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಗ್ರಾಮಸ್ಥರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು  ಜೈಕಾರ ಕೂಗಿದರು.

ಜಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ ನಮ್ಮೂರಿನ ಜಾತ್ರೆಗೆ ನಾನು ಎಂದೂ ತಪ್ಪಿಸಿಕೊಂಡಿಲ್ಲ ಎಂದರು.

ನಾನು ಇದೇ ಊರಿನವನು. ಊರಿನೊಂದಿಗೆ ನಿಕಟವಾದ ಸಂಪರ್ಕ ಇದೆ.ಸಚಿವನಾಗಿದ್ದಾಗಲೂ ಬಂದಿದ್ದೆ. ಮುಖ್ಯಮಂತ್ರಿ ಆಗಿದ್ದಾಗಲೂ ಬಂದಿದ್ದೆ. ಈಗಲೂ ಬಂದಿದ್ದೇನೆ ಎಂದು ಹೇಳಿದರು.

ಕೋವಿಡ್ ಬಂದಿದ್ದ ಕಾರಣ ಕಳೆದ ವರ್ಷ ಹಬ್ಬ ಮಾಡಿರಲಿಲ್ಲ. ಜಾತ್ರೆಗೆ ಬೇರೆ ಕಡೆಯವರೆಲ್ಲಾ ಬಂದಿರುತ್ತಾರೆ. ಇಲ್ಲಿ ಬಂದು ಹೋಗೋದೆ ಖುಷಿ ಎಂದು ಸಿದ್ದು ಹರ್ಷ ಪಟ್ಟರು.

ಜಾತ್ರೆಯಲ್ಲಿ ಕುಣಿಯಲಾರೆ ಎಂದಿದ್ದರೂ ಜನರ ಉತ್ಸಾಹ ಕಂಡು  ಸಿದ್ದರಾಮಯ್ಯ ಕುಣಿದು ಕುಪ್ಪಳಿಸಿದರು. ಸಕ್ಕತ್ ಸ್ಟೆಪ್ ಹಾಕಿ ಗ್ರಾಮಸ್ಥರ ಸಂಭ್ರಮದಲ್ಲಿ ಭಾಗಿಯಾದರು.

ಜಾನಪದ ವಾದ್ಯಗಳ ಸದ್ದಿಗೆ ತಕ್ಕಂತೆ ಗ್ರಾಮದ ಹಳೇ ಸ್ನೇಹಿತರ ಜೊತೆ ಹೆಜ್ಜೆ ಹಾಕಿದರು. ಸುಮಾರು 15ವರ್ಷಗಳ ಬಳಿಕ ಗ್ರಾಮದ ಜಾತ್ರೆಯಲ್ಲಿ ಸಿದ್ದು ಕುಣಿದಿದ್ದಾರೆ.

ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೀರಮಕ್ಕಳ ಕುಣಿತ ಕುಣಿದಿದ್ದರು.

ಶಾಸಕ ಡಾ.ಯತೀಂದ್ರ ಈ ವೇಳೆ ಮಾತನಾಡಿ ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡೋದು ವಾಡಿಕೆ. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿ ಸಂಬ್ರಮಿಸಿದರು.

ಅಪ್ಪ ಮೊದಲೇ ಹೇಳಿದ್ದರು ನಾನು ಡ್ಯಾನ್ಸ್ ಮಾಡಲ್ಲ ಅಂತ. ಆದರೆ ಜನರ ಖುಷಿ ನೋಡಿ ಉತ್ಸಾಹ ಬಂದು ಅವರು  ಡ್ಯಾನ್ಸ್ ಮಾಡಿದ್ದಾರೆ. ಅಪ್ಪ ಸ್ಕೂಲ್ ಬಿಟ್ಟು ವೀರನ ಕುಣಿತ ಕಲಿತಿದ್ದರು. ಹೀಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ. ನನಗೆ ಈ ರೀತಿ ಕುಣಿಯೋಕೆ ಚಿಕ್ಕಂದಿನಿಂದಲೂ ಬಿಡಲಿಲ್ಲ ಎಂದು ಹೇಳಿದರು.