ತೈಲ, ಅಡುಗೆ ಅನಿಲ ಬೆಲೆ ಏರಿಕೆಗೆ ನವೀನ್ ಕುಮಾರ್ ಖಂಡನೆ

ಮೈಸೂರು: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಗ್ಯಾಸ್ ಹಾಗೂ ತೈಲ ಬೆಲೆ ಏರಿಸಿರುವುದು  ಖಂಡನೀಯ ಎಂದು ಯುವ ಕಾಂಗ್ರೆಸ್ ಮುಖಂಡ ಎನ್. ಎಂ. ನವೀನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದೇ,ಪದೇ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಂತೆ ಆಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ತೈಲ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ  ಕೂಡಲೇ ತೈಲಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತೈಲ ಬೆಲೆ ಏರಿಕೆ ಜೊತೆಗೆ ಅಡುಗೆ ಅನಿಲದ ದರ 50 ರೂ ಹೆಚ್ಚಳವಾಗಿ, ಪ್ರತಿ ಸಿಲಿಂಡರ್ ಬೆಲೆ 1000 ರೂ ಸನಿಹಕ್ಕೆ ತಲುಪಿದೆ.

ಪೆಟ್ರೋಲಿಯಂ ಬೆಲೆ ಏರಿಕೆಯ ಬಗ್ಗೆ ಸರ್ಕಾರವನ್ನು ಟೀಕಿಸಿದಾಗ, ಅದು ಜಾಗತಿಕ ದರಗಳ ಕಡೆಗೆ, ತೈಲ ಕಂಪನಿಗಳ ಕಡೆಗೆ ಕೈ ತೋರಿಸುತ್ತದೆ. ಆದರೆ ಚುನಾವಣೆಗಳ ಸಂದರ್ಭದಲ್ಲಿ ಬೆಲೆ ಏರಿಕೆ ಆಗದೇ ಇರುವುದನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ ವಂಚನೆ ಜನರಿಗೆ ಅರ್ಥವಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ನೆಪ ನೀಡಿ  ಬೆಲೆ ಏರಿಕೆ ಮಾಡಲಾಗಿದೆ. ಆದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 135 ಡಾಲರ್ ನಿಂದ 100 ಡಾಲರ್ ಗೆ ಇಳಿದಿದೆ.

ಕೇಂದ್ರ ಸರ್ಕಾರ ಬಡವರ ಮೇಲೆ ತೆರಿಗೆಯ ಬರೆ ಎಳೆಯುತ್ತಿದೆ. ಬೆಲೆ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಂಡು ಬಡವರ ಹಿತ ಕಾಯಬೇಕೆಂದು ನವೀನ್ ಒತ್ತಾಯಿಸಿದ್ದಾರೆ.