ಭಾರತವನ್ನು ವಿಶ್ವಗುರುವನ್ನಾಗಿಸಲು ವೆಂಕಯ್ಯ ನಾಯ್ಡು ಕರೆ

ಮೈಸೂರು: ಭಾರತವನ್ನು ವಿಶ್ವಗುರುವನ್ನಾಗಿಸುವಂತೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮೈಸೂರು ವಿಶ್ವವಿದ್ಯಾನಿಲಯ, ಭಾರತೀಯ ವಿಶ್ವವಿದ್ಯಾಲಯಗಳ ಸಂಘದ 96ನೇ ವಾರ್ಷಿಕ ಸಭೆ ಮತ್ತು ಕುಲಪತಿಗಳ ರಾಷ್ಟ್ರೀಯ ಸಮ್ಮೇಳನವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕುಲಪತಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಸಂತೋಷ ನೀಡಿದೆ. ಉನ್ನತ ಶಿಕ್ಷಣದ ಕುರಿತು ಚರ್ಚೆ ಮಾಡುವುದಕ್ಕೆ, ಸುಸ್ಥಿರ ಅಭಿವೃದ್ಧಿಗೆ ಸಹಕರಿಸುವುದಕ್ಕೆ ಇಂತಹ ಸಮ್ಮೇಳನಗಳ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಶ್ಯಾಂ ಪ್ರಸಾದ್ ಮುಖರ್ಜಿ, ಸರ್ವಪಲ್ಲಿ ರಾಧಾಕೃಷ್ಣ ಸೇರಿದಂತೆ ಹಲವರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸುಧಾರಣೆಗಳನ್ನು ಮಾಡುವ ಮೂಲಕ ಸಾಕಷ್ಟು ಶ್ರಮಿಸಿದ್ದರು ಎಂದು ವೆಂಕಯ್ಯನಾಯ್ಡು ಸ್ಮರಿಸಿದರು.

ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಯಾವ ರೀತಿ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸುಸ್ಥಿರ ಅಭಿವೃದ್ಧಿಯ ಪಾತ್ರವೇನು ಎನ್ನುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ನಮ್ಮದು ಎರಡನೇ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. 20-30 ಅವಧಿಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಬೇಕಿದೆ. ಗಣನೀಯ ಪ್ರಗತಿಯನ್ನು ಸಾಧಿಸಿ ಲಿಂಗ ಸಮಾನತೆಯತ್ತ ಸಾಗಬೇಕಿದೆ.

ನಿರ್ದಿಷ್ಟ ಗುರಿಯನ್ನು ತಲುಪಲು ಪ್ರಾಥಮಿಕ, ಮಾಧ್ಯಮಿಕ, ಕಾಲೇಜು, ವಿವಿಗಳು ಮಹತ್ವದ ಪಾತ್ರ ವಹಿಸಲಿದೆ. ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿಯ ಜಾಗೃತಿಯನ್ನು ಮೂಡಿಸುವ ಕೆಲಸವಾಗಬೇಕು. ಸಮಾಜಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಕೊಡುಗೆಯನ್ನು ನೀಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಎಲ್ಲರೂ ಸಂತೋಷವಾಗಿರಬೇಕು ಇದು ದೇಶದ ಮಂತ್ರ ಎಂದು ತಿಳಿಸಿದರು.

ಆರೋಗ್ಯ, ಶಿಕ್ಷಣ ಎಲ್ಲವಕ್ಕೂ ದೇಶ ಒತ್ತು ನೀಡುತ್ತಿದೆ. ಎಲ್ಲ ಕಡೆಯು ಐಡಿಯಾಗಳನ್ನು ಪರಸ್ಪರ ಹಂಚಿಕೊಂಡು ಒಬ್ಬರಿಗೊಬ್ಬರು ಚರ್ಚಿಸಬೇಕು.

ಸವಾಲುಗಳನ್ನು ಎದುರಿಸುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಸಂಶೋಧನೆಗೆ ಹೆಚ್ಚು ಒತ್ತುಕೊಡಬೇಕು. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಳತ್ತ ಬೆಳಕು ಚೆಲ್ಲಬೇಕು. ಭಾರತವನ್ನು ವಿಶ್ವಗುರುವಾಗಿಸುವತ್ತ ಪಣ ತೊಡಬೇಕು ಎಂದು ಉಪ ರಾಷ್ಟ್ರಪತಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಎಐಯು ಅಧ್ಯಕ್ಷ ಡಾ.ಜಿ.ತಿರುವಾಸಗಂ, ಜನರಲ್ ಸೆಕ್ರೆಟರಿ ಡಾ.ಪಂಕಜ ಮಿತ್ತಲ್, ಕುಲಸಚಿವ ಪ್ರೊ.ಆರ್.ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು.