ಕಾಂಗ್ರೆಸ್ ನವರಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲು ಆಗುವುದಿಲ್ಲ -ಪ್ರತಾಪ್ ಸಿಂಹ

ಮೈಸೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಇದು ಕಾಂಗ್ರೆಸ್ ನವರೇ ಮಾಡಿದ ಅಪರಾಧ, ಅದನ್ನು ಅವರೇ ನೋಡಲು ಹೇಗೆ ಸಾಧ್ಯ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಜನರು ಚಿತ್ರವನ್ನು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. ದಿ ಕಾಶ್ಮೀರ್ ಫೈಲ್ಸ್ ನಲ್ಲಿರುವ ಒಂದೊಂದು ದೃಶ್ಯವೂ ಸತ್ಯ ಎಂದರು.

ಕಾಂಗ್ರೆಸ್ ನವರಿಗೆ ಈ ಚಿತ್ರವನ್ನು ನೋಡಲು ಆಗುವುದಿಲ್ಲ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯ ಈ ಸಿನಿಮಾವನ್ನು ಕಾಂಗ್ರೆಸ್ ನವರು ನೋಡೋದಕ್ಕೆ ಎದೆಗಾರಿಕೆ ಬೇಕು ಎಂದು ತಿಳಿಸಿದರು.

ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಿದರೆ ಬೆಂಬಲಿಸುತ್ತೇನೆ. ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಲ್ಲ. ಅದರಲ್ಲಿ ಜೀವನದ ನೀತಿ ಪಾಠವಿದೆ.

ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ ಅದು. ಒಂದೇ ದೇವರನ್ನು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ.

ಧರ್ಮ ಅಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತ ಅಲ್ಲ. ಹಿಂದೂ ಧರ್ಮವೇ ಜೀವನ ಶೈಲಿ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯ ಎಂದರು.

ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವುದಕ್ಕೆ ಅಭ್ಯಂತರವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಂತಃಕರಣದಿಂದ ನೈಜವಾಗಿ ಹೇಳಿದ್ದರೆ ಸ್ವಾಗತಿಸುತ್ತೇನೆ. ಜತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನೂ ಪಠ್ಯಕ್ರಮಕ್ಕೆ ಸೇರಿಸುವಂತೆ ಒತ್ತಾಯಿಸಲಿ ಎಂದು ಪ್ರತಾಪ್ ಸಿಂಹ ಹೇಳಿದರು.

ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆಯನ್ನಲ್ಲ, ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ ಎಂದು ಟಾಂಗ್ ನೀಡಿದರು.