ಮೈಸೂರು: ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ ಎಂದು ಶಾಸಕ ಎಲ್ ನಾಗೇಂದ್ರ ತಿಳಿಸಿದರು.
ಕೆಎಂಪಿಕೆ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ವತಿಯಿಂದ ಅಂತರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಜಾಗೃತಿಗಾಗಿ ಭಾನುವಾರ ಮೈಸೂರಲ್ಲಿ ನಡೆದ ಪರಿಸರ ಸೈಕಲ್ ಜಾಥ ಉದ್ಘಾಟಿಸಿ ಶಾಸಕ ನಾಗೇಂದ್ರ ಮಾತನಾಡಿದರು.
ಬೇಸಿಗೆಯ ಬಿಸಲಿನ ತಾಪಮಾನ ಹೆಚ್ಚುತ್ತಿರುವದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಜೀವ ಉಳಿಸಲು ಪ್ರತಿಯೊಬ್ಬರ ತಮ್ಮ ಮನೆಯ ತಾರಸಿಯ ಮೇಲೆ ನೀರು ಧಾನ್ಯಗಳನ್ನ ಇಡಲು ಮುಂದಾಗಬೇಕು. ಗುಬ್ಬಚ್ಚಿಯ ಸಂತತಿ ಉಳಿಯಬೇಕಿದೆ, ಭೂಮಿಯಲ್ಲಿ ಮನುಷ್ಯರಂತೆ ಪ್ರಾಣಿಪಕ್ಷಿಗಳಿಗೂ ಬದುಕುವ ಸ್ವತಂತ್ರತೆಯಿದೆ. ಈ ನಿಟ್ಟಿನಲ್ಲಿ ಯುವಕರು ಹೆಚ್ಚಾಗಿ ಪರಿಸರ ಸೇವಾಮನೋಭಾವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಪುರಾತನ ದೇವಸ್ಥಾನ ಗುಡಿಗೋಪುರಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಮಾತ್ರ ಗುಬ್ಬಚ್ಚಿಗಳು ಈಗಲೂ ಹೆಚ್ಚಿರುತ್ತವೆ. ಭವಿಷ್ಯಕ್ಕಾಗಿ ನಾವು ಪರಿಸರ ಗಿಡಮರಗಳನ್ನ ಹೆಚ್ಚಾಗಿ ಬೆಳಸಲು ಮುಂದಾಗಬೇಕು ಎಂದರು.
ನಂತರ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ ಪ್ರಾಣಿಪಕ್ಷಿಗಳ ರಕ್ಷಣೆಗೆ ಪರಿಸರ ಉಳಿವಿಗೆ ಜಿಲ್ಲಾಳಿತ ಎನ್.ಜಿ.ಓ ಗಳ ಸ್ವಯಂಪ್ರೇರಿತರ ವಿಭಾಗ ರಚಿಸಲು ಮುಂದಾಗಬೇಕು ಎಂದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಮಾತನಾಡಿ ಸೋಲಾರ್ ವಿದ್ಯುತ್ ಬಂದಮೇಲೆ ಮರಗಳ ಹನನ ಕ್ರಮೇಣ ಕಡಿಮೆಯಾಯಿತು. ಆದರೆ ಮರಗಿಡಗಳನ್ನ ಬೆಳಸಲು ನಾಗರೀಕರು ಹೆಚ್ಚಾಗಿ ಮುಂದಾಗುತ್ತಿಲ್ಲ ಎಂದರು.
ಸೈಕಲ್ ಸವಾರರಿಗೂ ಹೆಚ್. ವಿ ರಾಜೀವ್ ಅಭಿನಂದನಾ ಪತ್ರ ವಿತರಿಸಿದರು.
350ಕ್ಕೂ ಹೆಚ್ಚು ಮಂದಿ ಸೈಕಲ್ ಸವಾರರು ಜಾಥಾದಲ್ಲಿ ಭಾಗವಹಿಸಿದ್ದರು.

