ದಟ್ಟಗಳ್ಳಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಕ್ರಮ -ಜಿ.ಟಿ.ದೇವೇಗೌಡ

ಮೈಸೂರು: ಮೈಸೂರಿನ ಪ್ರಮುಖ ಬಡಾವಣೆಗಳಲ್ಲಿ ಒಂದಾದ ದಟ್ಟಗಳ್ಳಿಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

೧ ಕೋಟಿ ೭೭ ಲಕ್ಷ ವೆಚ್ಚದಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ. ೪೬ರ ದಟ್ಟಗಳ್ಳಿಯಿಂದ ಬೆಮೆಲ್ ಮೂಲಕ ರಿಂಗ್ ರಸ್ತೆ ಸೇರುವ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಟ್ಟಗಳ್ಳಿ ಬಡಾವಣೆಯ ಎಲ್ಲ ರಸ್ತೆಗಳು ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.ಎಲ್ಲಾ ಉದ್ಯಾನವನಗಳನ್ನು ಮಾದರಿ ಪಾರ್ಕ್ ಗಳನ್ನಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಕಾಮಗಾರಿಯಲ್ಲಿ ಈಗಿರುವ ರಸ್ತೆಯ ಅಗಲವನ್ನು ವಿಸ್ತರಣೆ ಮಾಡಿ ಅಭಿವೃದ್ಧಿ ಮಾಡಿ, ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಜಿಟಿಡಿ ಹೇಳಿದರು.

ನಂತರ ವಾರ್ಡ್ ನಂ.೪೪ರ ವ್ಯಾಪ್ತಿಯ ಜನತಾ ನಗರದಲ್ಲಿ ಒಳಚರಂಡಿ ಸಮಸ್ಯೆಗಳನ್ನು ಜಿ.ಟಿ.ದೇವೇಗೌಡ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಮೇಯರ್ ಸುನಂದಪಾಲನೇತ್ರ, ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತರೆಡ್ಡಿ, ಪಾಲಿಕೆ ಸದಸ್ಯರಾದ ಲಕ್ಷ್ಮಿಕಿರಣ್, ಸವಿತ ಸುರೇಶ್, ಅಧೀಕ್ಷಕ ಅಭಿಯಂತರರಾದ ಮಹೇಶ್, ಮುಖಂಡರಾದ ರಮೇಶ್ ಕಲ್ಲಿಪಾಳ್ಯ, ಶೇಖರ್, ಶಶಿ, ವೆಂಕಟೇಶ್, ಸುರೇಶ್, ವಿಕ್ಕಿ, ಸುನೀತಾ ಬಂಡೆ, ಸಂತೋಷ್, ಬಸವಣ್ಣ ಹಾಗೂ ವಲಯ ಅಧಿಕಾರಿ ಪ್ರಕಾಶ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಮೂಡಾ ಅಧಿಕಾರಿ ಲೋಹಿತ್ ಮತ್ತಿತರರು ಹಾಜರಿದ್ದರು.