ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಟಿಪ್ಪು ವಿಚಾರಕ್ಕೆ ಕತ್ತರಿ ಹಾಕುವ ಸರ್ಕಾರದ ನಿರ್ಧಾರ ಸರಿಯಲ್ಲ,ಅದು ಇತಿಹಾಸದ ವಿಚಾರ, ಅದನ್ನು ಯಾರೂ ತಿರುಚಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅದರ ಬಗ್ಗೆ ಮಾತನಾಡುವುದು ಬೇಡ. ರಾಷ್ಟ್ರಪತಿಗಳು ಬಂದು ನಮಗೆ ಟಿಪ್ಪು ಬಗ್ಗೆ ಏನು ಪಾಠ ಮಾಡಬೇಕೋ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಅದನ್ನು ನೋಡಲಿ ಎಂದರು.
ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಬಂದಿರುವುದಕ್ಕೆ ಯಾವುದೇ ದಾಖಲೆ ಇಲ್ಲವೆಂದು ಸಮಿತಿ ಹೇಳಿರುವ ಬಗ್ಗೆ ಕೇಳಿದಾಗ ಟಿಪ್ಪುವಿಗೆ ಮೈಸೂರ್ ಹುಲಿ ಎಂದು ಬಿರುದು ಕೊಟ್ಟದ್ದು ಬ್ರಿಟಿಷರು.
ನಾನೂ ಅಲ್ಲ, ಕಾಂಗ್ರೆಸ್ ನವರೂ ಅಲ್ಲ, ಬಿಜೆಪಿಯವರೂ ಅಲ್ಲ. ಲಂಡನ್ ಮ್ಯೂಸಿಯಂ ನಲ್ಲಿ ಇರುವ ದಾಖಲೆ ನೋಡಲಿ. ಬ್ರಿಟಿಷರನ್ನು ಕೇಳೋಣ. ಯಾರೂ ಕೊಟ್ರು ಬಿರುದು ಅಂತ ಎಂದು ಖಾರವಾಗಿ ಪ್ರತಿ ಕ್ರಿಯಿಸಿದರು.
ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಟಿಪ್ಪು ಬ್ರಿಟಿಷರ ಜತೆ ಹೊರಡಿದ್ದು, ಕೊಲ್ಲೂರು, ಶೃಂಗೇರಿ ಮಠಗಳಿಗೆ ಏನೇನು ಮಾಡಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ಯಾರೂ ಸೃಷ್ಟಿಸಲು, ತಿರುಚಲು ಆಗದು ಎಂದು ಡಿಕೆಶಿ ಹೇಳಿದರು.
ಮುಸಲ್ಮಾನ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಯಾವುದೇ ಧರ್ಮದವರ ವ್ಯಾಪಾರಕ್ಕೆ ಅಡಚಣೆ ಮಾಡಬಾರದು ಎಂದು ತಿಳಿಸಿದರು.
ಅವಧಿಪೂರ್ವ ಚುನಾವಣೆ ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ಈ ತಿಂಗಳು ಅಥವಾ ನಾಳೆಯೇ ಮಾಡಲಿ, ನವೆಂಬರ್ 27ಕ್ಕೆ ಚುನಾವಣೆ ಪ್ರಕಟಿಸಲಿ, ಕಾಂಗ್ರೆಸ್ ಸಜ್ಜಾಗಿದೆ ಎಂದು ಉತ್ತರಿಸಿದರು.
ನವೆಂಬರ್ 27 ಎಂದು ಹೇಗೆ ಹೇಳುತ್ತೀರಾ ಎಂಬ ಪ್ರಶ್ನೆಗೆ, ನಿಮಗೆ ಮಾಹಿತಿ ನೀಡಲು ಮೂಲಗಳು ಇರುವಂತೆ ನಮಗೂ ಇದ್ದಾರೆ. ನಮಗೂ ಮಾಹಿತಿ ಬರುತ್ತದೆ ಎಂದು ಸಮರ್ಥಿಸಿಕೊಂಡರು.
ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮ ನಿಮಿತ್ತ ಇದೇ 31 ರಂದು ಮಧ್ಯಾಹ್ನ 3.30 ಕ್ಕೆ ತುಮಕೂರು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸುವರು.
ನಂತರ ಬೆಂಗಳೂರಿಗೆ ಬಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಏ.1 ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018 ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಲಿದ್ದಾರೆ.

