2ನೇ ಉಪಲೋಕಾಯುಕ್ತರಾಗಿ ಕೆ.ಎನ್.ಫಣೀಂದ್ರ ಅಧಿಕಾರ ಸ್ವೀಕಾರ

ಬೆಂಗಳೂರು: ಸುಮಾರು ಎರಡು ವರ್ಷಗಳಿಂದ ಖಾಲಿ ಇದ್ದ ಕರ್ನಾಟಕ 2ನೇ ಉಪಲೋಕಾಯುಕ್ತ‌ ಹುದ್ದೆ ಇದೀಗ ಭರ್ತಿ ಯಾಗಿದೆ.

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ 2ನೇ ಉಪ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಫಣೀಂದ್ರ ಅವರಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಗೌಪ್ಯತೆಯನ್ನು ಬೋಧಿಸಿದರು.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಆನಂದ ಅವರ ಸೇವಾವಧಿ 2020ರ ಡಿಸೆಂಬರ್‍ನಲ್ಲಿ ಅಂತ್ಯವಾಗಿತ್ತು. ತೆರವಾಗಿದ್ದ ಈ ಸ್ಥಾನಕ್ಕೆ ನಿವೃತ್ತ ನ್ಯಾ. ಕೆ.ಎನ್.ಫಣೀಂದ್ರ ಅವರನ್ನು ನೇಮಿಸಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೆಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ ಕೀರ್ತಿ ಕೆ.ಎನ್.ಫಣೀಂದ್ರ ಅವರಿಗೆ ಸಲ್ಲುತ್ತದೆ.

ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಸಮ್ಮತಿಸಿದ ರಾಜ್ಯಪಾಲರು ಸೋಮವಾರ ನೇಮಕಾತಿ ಆದೇಶಕ್ಕೆ ಸಹಿ ಹಾಕಿದ್ದರು.

ಮತ್ತೊಂದು ಉಪ ಲೋಕಾಯುಕ್ತ ಹುದ್ದೆಯಲ್ಲಿ ನಿವೃತ್ತ ನ್ಯಾ. ಬಿ.ಎಸ್.ಪಾಟೀಲ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು 2022ರ ಜನವರಿ 28ರಂದು ಅಧಿಕಾರ ಪೂರ್ಣಗೊಳಿಸಿದ್ದು, ಸುಮಾರು ಎರಡು ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಈ ಹುದ್ದೆಗೆ  ಅರ್ಹರನ್ನು ಸರ್ಕಾರ ನೇಮಕ ಮಾಡಬೇಕಿದೆ.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ಉಪ ಸಭಾಪತಿ ಆನಂದ್ ಮಾಮನಿ, ಗೃಹ ಸಚಿವ ಆರಗ ಜ್ಞಾನೆಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ, ಶಾಸಕ ಸುರೇಶ್ ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತಿತರರು ಉಪಸ್ಥಿತರಿದ್ದರು.