ಬೆಂಗಳೂರು: ಭುಗಿಲೆದ್ದಿರುವ ಹಲಾಲ್ ಕಟ್ – ಜಟ್ಕಾ ಕಟ್ ವಿವಾದದ ನಡುವೆ ಯುಗಾದಿಯ ಹೊಸ ತೊಡಕು ಮಾಂಸ ಖರೀದಿಗೆ ಜನ ಮುಗಿಬಿದ್ದರು.
ವಿವಿಧ ಸಂಘಟನೆಗಳು ಹಲಾಲ್ ಕಟ್ ಬಗ್ಗೆ ಹಲವು ದಿನಗಳಿಂದ ಜಾಗೃತಿ ಮೂಡಿಸಿದ್ದರ ಹಿನ್ನೆಲೆಯಲ್ಲಿ ಬಹುತೇಕ ಕಡೆ ಹಲಾಲ್ ಕಟ್ ಮಾಂಸ ಖರೀದಿಗೆ ಬ್ರೇಕ್ ಬಿದ್ದಿತ್ತು.
ರಾಜಧಾನಿ ಬೆಂಗಳೂರು, ಶಿವಮೊಗ್ಗ, ತುಮಕೂರು, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಹಾಸನ ಸೇರಿದಂತೆ ಬಹುತೇಕ ಕಡೆ ಮಾಂಸದ ಖರೀದಿ ಜೋರಾಗಿಯೇ ನಡೆದಿತ್ತು.
ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ಮಾಂಸ ಖರೀದಿಗಿಂತ ಹೆಚ್ಚಾಗಿ ಗುಡ್ಡೆ ಮಾಂಸ ಖರೀದಿಯಲ್ಲೇ ಜನರು ತೊಡಗಿದ್ದು ಕಂಡುಬಂತು.
ರಾಜ್ಯದ ಹಲವೆಡೆ ಹಲಾಲ್ ಕಟ್ ಮಾಂಸವನ್ನು ಹಿಂದೂಪರ ಸಂಘಟನೆಗಳವರು ಬಹಿಷ್ಕರಿಸಿರುವುದರಿಂದ ಈ ಮಾಂಸದ ಅಂಗಡಿಗಳ ಬಳಿ ಜನರ ಸಂಖ್ಯೆ ವಿರಳವಾಗಿದ್ದರೆ, ಹಿಂದೂ ಮಾಂಸದ ಅಂಗಡಿಗಳ ಮುಂದೆ ಜನರ ಕ್ಯೂ ಹೆಚ್ಚಾಗಿತ್ತು.
ಬೆಳಗಿನ ಜಾವ 2 ಗಂಟೆಯಿಂದಲೇ ಮಾಂಸ ಖರೀದಿಗೆ ಕೆಲವೆಡೆ ಜನ ಕ್ಯೂ ನಿಂತಿದ್ದರು. ಎರಡುಮೂರು ವಾರಗಳಿಂದ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಉಂಟಾಗಿದ್ದರೂ ಜನ ಅದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಎಂದಿನಂತೆ ತಮ್ಮ ರೆಗ್ಯುಲರ್ ಅಂಗಡಿಗಳಲ್ಲೇ ಮಾಂಸ ಖರೀದಿ ಮಾಡುತ್ತಿದ್ದರು.
ಅದರೆ ಮತ್ತೆ ಕೆಲವರು ನಮ್ಮಲ್ಲಿ ಈಗ ಜಾಗೃತಿ ಮೂಡಿದೆ. ಹಲಾಲ್ ಕಟ್ ಮಾಂಸ ಏಕೆ ಖರೀದಿ ಮಾಡಬೇಕು. ಜಟ್ಕಾ ಕಟ್ ಮಾಂಸವನ್ನೇ ಖರೀದಿಸೋಣ ಎಂದು ಮಾಂಸದ ಮಳಿಗೆಗಳನ್ನು ಹುಡುಕಿಕೊಂಡು ಹೋಗಿ ಮಾಂಸ ಖರೀದಿಸುತ್ತಿದದ್ದೂ ಕಂಡುಬಂತು.
ಒಟ್ಟಾರೆ ಈ ಬಾರಿ ಹೊಸ ತೊಡಕು ಭಾನುವಾರ ಬಂದಿದ್ದರಿಂದ ಮಾಂಸ ಖರೀದಿ ಭರಾಟೆ ಜೋರಾಗಿತ್ತು.

