ಬೆಂಗಳೂರು: ಕಾಂಗ್ರೆಸ್ ನ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 156 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ತಲುಪಬೇಕು ಎಂದು ಎಐಸಿಸಿ ನಿಕಟ ಪೂರ್ವ ಅಧ್ಯಕ್ಷ ರಾಹುಲ್‍ಗಾಂಧಿ ಕರೆ ನೀಡಿದರು.
ಬೆಂಗಳೂರಿನ ಕೆಪಿಸಿಸಿ ನೂತನ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು, ನಾಯಕರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಹಿಂದಿನ ಇತಿಹಾಸ, ಪಕ್ಷ ನಿಷ್ಠೆ, ಸದ್ಯದ ಆತನ ಕೆಲಸ ಆಧರಿಸಿ ಚುನಾವಣೆಗೆ ಟಿಕೆಟ್ ನೀಡಲಾಗುವುದು. ಚುನಾವಣಾ ಹೋರಾಟ ಮತ್ತು ಗೆಲುವು ಗುರಿಯಾಗಿರಬೇಕು. 156 ಸೀಟ್ ಗೆಲ್ಲಲೇ ಬೇಕು. ಯುವಕರನ್ನು ತರಬೇತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ನೋಟು ಅಮಾನೀಕರಣ, ಜಿಎಸ್‍ಟಿ, ಕೃಷಿ ಕಾನೂನುಗಳಿಂದ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ. ಸಣ್ಣ ವ್ಯಾಪಾರಿಗಳು ಸರ್ವನಾಶವಾಗಿದ್ದಾರೆ.
ರಾಜ್ಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರವಿದೆ. ಪ್ರಧಾನಿ ಮೊದಿಯವರು ಬಂದು ಇಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜನ ನಗುತ್ತಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯ ವಾಡಿದರು.
ಜನಸಾಮಾನ್ಯರನ್ನು ಸುಲಿಗೆ ಮಾಡಿ ಒಂದೆರಡು ಉದ್ಯಮಿಗಳನ್ನು ಉದ್ದಾರ ಮಾಡಿದ್ದಾರೆ. ಮತ ಕ್ರೂಢೀಕರಣಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ಸಮಾಜ ಒಡೆಯುತ್ತಿದ್ದಾರೆ. ನಾವು ಜೋಡಿಸುತ್ತಿದ್ದೇವೆ ಎಂದು ರಾಹುಲ್ ಹೇಳಿದರು.

