ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು -ಸಿಎಂ ಘೋಷಣೆ

ತುಮಕೂರು:‌ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಎಂದು ಹೆಸರಿನಿಟ್ಟು ಅದನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠದ ಭಕ್ತನಾಗಿ ಅವರ ಸೇವೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಸಿಕ್ಕಿರುವುದೇ ಪುಣ್ಯ, ಈ ಮಠದ ಮಣ್ಣಿನಲ್ಲಿ ನಡೆದಾಡುವ ದೇವರ ಆತ್ಮವಿದೆ, 88 ವರ್ಷಗಳ ಕಾಲ ಮಠದ ಮೂಲಕ ರಾಜ್ಯದ ಸೇವೆಯನ್ನು ಮಾಡಿರುವ ಶ್ರೀಗಳು ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಅನ್ನ, ಅಕ್ಷರ, ಆಶ್ರಯ ಕಲ್ಪಿಸುವುದೇ ದಾಸೋಹದ ಆಶಯ, ಶ್ರೀಗಳು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರು ಅವರ ನಡೆ ನುಡಿ ನಮಗೆ ಸ್ಪೂರ್ತಿಯಾಗಿದೆ, ಅನೇಕ ಬಡ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಮಹಾನ್ ಸಂತ ಡಾ.ಶಿವಕುಮಾರ ಸ್ವಾಮೀಜಿ ಅವರ ದೈವಶಕ್ತಿ ನಮಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಸ್ಮರಿಸಿದರು.

ಸ್ವಾಮೀಜಿಗಳು ಜಾತಿ ವರ್ಗ ಮೀರಿದವರು, ಸರ್ವೋದಯದ ಪರಿಕಲ್ಪನೆ ನಿತ್ಯ ನಿರಂತರವಾಗಿತ್ತು.

ಅಂತ್ಯೋದಯ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಇಲ್ಲಿ ಅವಕಾಶವಿದ್ದು, ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಬೇಕು ಎಂದು ಸಿಎಂ ಆಶಿಸಿದರು.

ಜನಕಲ್ಯಾಣಕ್ಕಾಗಿ ಸರ್ಕಾರ  ಅನ್ನ, ಅಕ್ಷರ, ಆಶ್ರಯ ಮತ್ತು ಆರೋಗ್ಯಕ್ಕಾಗಿ 60 ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದು, ಹಿಂದುಳಿದ, ದಲಿತರ ಅಭ್ಯುದಯಕ್ಕೆ ಶ್ರಮಿಸುವ ಮೂಲಕ ಜನ ಪರ ಆಡಳಿತವನ್ನು ನೀಡಲು ಶ್ರಮಿಸುತ್ತೇನೆ ಎಂದು ಬೊಮ್ಮಾಯಿ  ನೀಡಿದರು.