ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ಪ್ರಯುಕ್ತ ಸಿದ್ಧಗಂಗಾ ಮಠದಲ್ಲಿ ಸಂಭ್ರಮ ಮೇಳೈಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ಧುಗೆ ದರ್ಶನ ಪಡೆದರು.
ಬೆಂಗಳೂರಿನಿಂದ ತುಮಕೂರಿಗೆ ಆಗಮಿಸಿದ ಅಮಿತ್ ಶಾಗೆ ಸಿದ್ಧಗಂಗಾ ಮಠದಲ್ಲಿ ಸ್ವಾಗತಿಸಲಾಯಿತು.
ನಂತರ ಅಮೀತ್ ಶಾ ಅವರು ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ಧುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳ 115ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ನಡೆದಾಡೋ ದೇವರ ಬಸವ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ಶಿವಕುಮಾರ್ ಸ್ವಾಮಿಗಳಿಗೆ ನುಡಿ ನಮನ ಸಲ್ಲಿಸಿದರು.
ಸಿದ್ದಗಂಗಾಮಠದ ಸಿದ್ದಲಿಂಗಸ್ವಾಮಿಗಳು, ಶ್ರೀಗಳು, , ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಮಠದಲ್ಲಿ ನಡೆಯುತ್ತಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದಾರೆ.
ಈ ಸಮಾರಂಭದಲ್ಲಿ ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಶ್ರೀಗಳು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು, ಸಂಸದರು ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಕಾಯಕ ಯೋಗಿ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ 115ನೇ ಜನ್ಮ ದಿನೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಶಿವಕುಮಾರಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜಾ ಕಾರ್ಯ ನಡೆಯಿತು.
ಗದ್ದುಗೆಗೆ ಹೂವಿನ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆಯನ್ನು ಕೈಗೊಳಲಾಯಿತು.
ಶರಣರ ನೇತೃತ್ವದಲ್ಲಿ ಮುಂಜಾನೆ ಸ್ವಾಮೀಜಿಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಲಾಯಿತು.
ಅಭಿಷೇಕದ ನಂತರ ಮಠಾಧೀಶರಾದ ಶ್ರೀ ಸಿದ್ಧಲಿಂಗಸ್ವಾಮೀಜಿಗಳು ಮಹಾಮಂಗಳಾರತಿ ಮಾಡಿ ಪೂಜೆಯನ್ನು ನೆರವೇರಿಸಿದರು.
ನಂತರ ಶ್ರೀಶಿವಕುಮಾರ ಸ್ವಾಮೀಜಿಗಳ ಕಂಚಿನ ವಿಗ್ರಹವನ್ನು ರುದ್ರಾಕ್ಷಿ ಪೀಠದಲ್ಲಿ ಕೂರಿಸಿ, ಮಠದ ಅಂಗಳದಲ್ಲಿ ಮೆರವಣಿಗೆ ಮಾಡಲಾಯಿತು.
ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ಗದ್ದುಗೆ ದರ್ಶನ ಪಡೆದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ವಿವಿಧೆಡೆ ಭಕ್ತರು ಕಾಯಕ ಯೋಗಿಯ ಜಯಂತ್ಸೋತ್ಸವದ ಅಂಗವಾಗಿ ದಾಸೋಹವನ್ನು ಹಮ್ಮಿಕೊಳ್ಳಲಾಯಿತು.

