ಶ್ರೀಶೈಲದಲ್ಲಿ ಘರ್ಷಣೆ:ಶಾಂತಿ ಕಾಪಾಡಲು ಸಿಎಂ ಮನವಿ

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಶೈಲದಲ್ಲಿ ಸ್ಥಳೀಯರು ಮತ್ತು ಭಕ್ತರ ನಡುವೆ ಸಂಘರ್ಷ ಉಂಟಾಗಿ ಕರ್ನಾಟಕ ಮೂಲದ ಭಕ್ತರೊಬ್ಬರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಮುಖ್ಯ ಮಂತ್ರಿ ಬೊಮ್ಮಾಯಿ ವಿಷಾಧಿಸಿದ್ದಾರೆ.

ವಿಧಾಸೌಧದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಆಂಧ್ರಪ್ರದೇಶದ ಅಧಿಕಾರಿಗಳ ಜತೆ ಮಾತನಾಡಿ ಸಂಪೂರ್ಣವಾದ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.

ಸ್ಥಳೀಯರು ಮತ್ತು ಭಕ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಗಲಭೆ ಕೊನೆಗೆ ಸಂಘರ್ಷಕ್ಕೆ ತಿರುಗಿ ಒಬ್ಬರು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ರೀತಿಯ ಪ್ರಾಣಾಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ ಮೋಹನ್‍ ರೆಡ್ಡಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸುತ್ತೇನೆ. ಮುಂದೆ ಇಂತಹ ಘಟನೆಗಳು ಮರುಕಳುಹಿಸದಂತೆ ಎಲ್ಲರೂ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಸೂಕ್ತ ರಕ್ಷಣೆ ಕೊಡುವಂತೆ ಆಂಧ್ರ ಪ್ರದೇಶದ ಸಿಎಂ ಹಾಗೂ ಅಧಿಕಾರಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು.

ಯಾವ ಕಾರಣಕ್ಕಾಗಿ ಘಟನೆ ನಡೆದಿದೆ ಎಂಬ ಸಂಪೂರ್ಣವಾದ ಮಾಹಿತಿ ಇಲ್ಲ. ಆದರೂ ಇಂತಹ ಘಟನೆ ನಡೆದಿರುವುದು ನೋವಿನ ಸಂಗತಿ ಎಂದು ಬೊಮ್ಮಾಯಿ ವಿಷಾದಿಸಿದರು.

ರಾಜ್ಯದಲ್ಲಿ ಪ್ರತಿಯೊಬ್ಬರೂ ಶಾಂತಿ, ಸುವ್ಯವಸ್ಥೆ ಕಾಪಾಡಿ ಸಂಯಮದಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದರು.