ಶ್ರೀಶೈಲಂನಲ್ಲಿ ಘರ್ಷಣೆ : ಕನ್ನಡಿಗ ಯುವಕನ ಹತ್ಯೆ -ನಿಷೇದಾಜ್ಞೆ ಜಾರಿ

ಹೈದರಾಬಾದ್ : ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದ್ದು ಆತಂಕ ಮನೆ ಮಾಡಿದೆ.

ಈ ಘಟನೆಯನ್ನು ಖಂಡಿಸಿ ರೊಚ್ಚಿಗೆದ್ದ ಕನ್ನಡಿಗರು ನೂರಾರು ಮಳಿಗೆಗಳನ್ನು ಧ್ವಂಸ ಮಾಡಿರುವುದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಗುಂಪು ಘರ್ಷಣೆಯಲ್ಲಿ ಹತ್ಯೆಯಾಗಿರುವ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ಶ್ರೀಶೈಲ ವಾರಿಮಠ್ (28) ಎಂದು ಗುರುತಿಸಲಾಗಿದೆ.

ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ರಾಜ್ಯದ ಸಾವಿರಾರು ಲಿಂಗಾಯತರು ಮತ್ತು ವೀರಶೈವರ ಆರಾಧ್ಯ ದೈವವಾಗಿದ್ದು, ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ರಾಜ್ಯದ ಲಕ್ಷಾಂತರ ಮಂದಿ ಶ್ರೀಶೈಲಂಗೆ ಭೇಟಿ ನೀಡುವುದು ವಾಡಿಕೆ.

ಅದೇ ರೀತಿ ಬುಧವಾರ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದವರು ಶ್ರೀಶೈಲಂಗೆ ತೆರಳಿದ್ದರು.

ಮಧ್ಯರಾತ್ರಿ ಬಾಗಲಕೋಟೆಯ ಶ್ರೀಶೈಲ ವಾರಿಮಠ್ ಅವರು ಹೊಟೇಲ್‍ವೊಂದಕ್ಕೆ ತೆರಳಿ ಕುಡಿಯಲು ನೀರು ಕೇಳಿ ನಂತರ ಬಾಟಲ್‍ಗೆ ನೀರು ತುಂಬಿಸಿಕೊಳ್ಳಲು ಮುಂದ್ದಾರೆ.

ಆಗ ಹೊಟೇಲ್ ಸಿಬ್ಬಂದಿ ಮತ್ತು ವಾರಿಮಠ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು ಸ್ಥಳೀಯರು ಚಾಕುವಿನಿಂದ ವಾರಿಮಠ್ ಅವರಿಗೆ ಇರಿದಿದ್ದಾರೆ.

ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇದರಿಂದ ಶ್ರೀಶೈಲಂಗೆ ಭೇಟಿ ನೀಡಿದ್ದ ಕನ್ನಡಿಗರ ಆಕ್ರೋಶದ ಕಟ್ಟೆ ಒಡೆದಿದೆ.

ರೊಚ್ಚಿಗೆದ್ದ ಕನ್ನಡಿಗರು ವಾರಿಮಠ್ ಕೊಲೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ನೂರಾರು ಮಳಿಗೆಗಳನ್ನು ಧ್ವಂಸಗೊಳಿಸಿದ್ದಾರೆ.

ಈ ವೇಳೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಗುಂಪು ಘರ್ಷಣೆ ನಡೆದು ಹಲವಾರು ವಾಹನಗಳು ಜಂಖಗೊಂಡಿವೆ.

ವಾರಿಮಠ್ ಕೊಲೆ ಖಂಡಿಸಿ ಸಾವಿರಾರು ಕನ್ನಡಿಗರು ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಪೊಲೀಸರು ವಾರಿಮಠ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಮೂವರನ್ನು ಬಂಧಿಸಿದ್ದಾರೆ.