ಬೆಲೆ ಏರಿಕೆ ವಿರೋಧಿಸಿ ಸಿಲಿಂಡರ್ ಹೊತ್ತು ಕಾಂಗ್ರೆಸ್ ನಾಯಕರ ಬೃಹತ್ ಪ್ರತಿಭಟನೆ

ಬೆಂಗಳೂರು: ಅಡಿಗೆ ಅನಿಲ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೆಂಗಳೂರು ಸೇರಿದಂತೆ ವಿವಿಧೆಡೆ ಬೃಹತ್ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಅಡಿಗೆ ಅನಿಲ ಸಿಲಿಂಡರ್‍ಗಳಿಗೆ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.

ಡಿ.ಕೆ.ಶಿವಕುಮಾರ್ ಸಿಲಿಂಡರ್ ಹಾಗೂ ದ್ವಿಚಕ್ರ ವಾಹನಗಳಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರು ಜಾಗಟೆ ಬಾರಿಸಿ ಸಾಥ್ ನೀಡಿದರು.

ಬೆಳಗ್ಗೆ 9.30ರಿಂದ ಆರಂಭವಾದ ಪ್ರತಿಭಟನೆ ಮಧ್ಯಾಹ್ನದವರೆಗೂ ನಡೆಯಿತು. ಕಾರ್ಯಕರ್ತರು ಹಾಗೂ ಮುಖಂಡರು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.

ಈ ವೇಳೆ ಡಿ.ಕೆ.ಶಿವಕುಮಾರ್  ಮಾತನಾಡಿ, ಜನರ ಆದಾಯ ಪಾತಾಳಕ್ಕೆ ಹೋಗಿದೆ. ಆದರೆ, ಬೆಲೆ ಏರಿಕೆ ಗಗನ ಮುಟ್ಟಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ಪಟ್ಟರು.

ನೂರು ಬಾರಿ ಚಪ್ಪಲಿ ಏಟನ್ನಾದರೂ ತಿನ್ನಬಹುದು. ಆದರೆ, ದುಡ್ಡಿನ ಏಟನ್ನು ತಿನ್ನಲಾಗುವುದಿಲ್ಲ ಎಂದು ಹೇಳಿದರು.

ಚೆಪ್ಪಲಿ ಏಟು ಬಿದ್ದರೆ ಮಾಟ ಮಂತ್ರ ಏನೋ ಒಂದು ಮಾಡಿಸಿ ದೋಷ ಪರಿಹಾರ ಮಾಡಿಕೊಳ್ಳಬಹುದು. ಆದರೆ, ದುಡ್ಡಿನ ಏಟಿಗೆ ಪರಿಹಾರವೇ ಇಲ್ಲ ಎಂದರು.

ಇವತ್ತಿಗೆ ಆರ್ಥಿಕ ವರ್ಷ ಕೊನೆಗೊಳ್ಳುತ್ತಿದೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ನಿರಂತರವಾಗಿ ದರ ಏರಿಕೆ ಮಾಡುತ್ತಿದೆ.ಇದರಿಂದ ಜನ ಸಾಮಾನ್ಯರು ತತ್ತರಿಸುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.