ಬೆಂಗಳೂರು: ಆರೋಗ್ಯ ಇಲಾಖೆಯಿಂದ ಹಲಾಲ್ ಕುರಿತಂತೆ ಯಾವುದೇ ಪ್ರಮಾಣಪತ್ರ ನೀಡುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖಡಕ್ ಆಗಿ ಹೇಳಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಹಲಾಲ್ ಬಗ್ಗೆ ಪ್ರಮಾಣ ಪತ್ರ ನೀಡುವುದು ನಮಗೆ ಬರುವುದಿಲ್ಲ. ನಾವು ಆ ರೀತಿಯ ಪ್ರಮಾಣಪತ್ರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಆಹಾರ ಸುರಕ್ಷತೆ ಕುರಿತಂತೆ ಪ್ರಮಾಣಪತ್ರ ನೀಡುತ್ತೇವೆ. ನಮ್ಮ ಇಲಾಖೆ ಆಹಾರ ಪದಾರ್ಥಗಳ ಗುಣಮಟ್ಟದ ಪ್ರಮಾಣ ಪತ್ರ ಮಾತ್ರ ನೀಡಲಿದೆ.
ಹೀಗಾಗಿ ಹಲಾಲ್ ಪ್ರಮಾಣಪತ್ರಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದರು.
ಮೂರು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯವನ್ನು ರದ್ದು ಮಾಡಲಾಗಿದೆ. ಕೆಲವು ದೇಶಗಳಲ್ಲಿ ನಾಲ್ಕನೆ ಅಲೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮಲ್ಲಿ ಶೇ. 90ರಷ್ಟು ಜನ ಮಾಸ್ಕ್ ಬಳಸುತ್ತಿಲ್ಲ. ನಾವೂ ಕೂಡ ಮಾಸ್ಕ್ ಬಳಸದವರಿಗೆ ದಂಡ ವಿಧಿಸುತ್ತಿಲ್ಲ ಎಂದು ತಿಳಿಸಿದರು.
ಕರ್ನಾಟಕದಲ್ಲೂ ಮಾಸ್ಕ್ ಕಡ್ಡಾಯ ರದ್ದು ವಿಚಾರವಾಗಿ ಸಮಾಲೋಚನೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸುಧಾಕರ್ ಉತ್ತರಿಸಿದರು.
ಓಮಿಕ್ರಾನ್ ಮುಂದುವರೆದ ರೂಪ ಚೀನಾ ಮತ್ತು ಕೆಲವು ರಾಷ್ಟ್ರಗಳಲ್ಲಿ ಕಂಡು ಬಂದಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಪರಿಗಣಿಸಲಾಗುವುದು.
ತಾಂತ್ರಿಕ ಸಲಹಾ ಸಮಿತಿ ಹಾಗೂ ಟಾಸ್ಕ್ ಪೋರ್ಸ್ ಮತ್ತು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

