ಬೆಂಗಳೂರು: ಯುಗಾದಿ ಸಿಹಿ-ಕಹಿಗಳ ಹಬ್ಬ, ಆದರೆ ಬಿಜೆಪಿ ಸರ್ಕಾರ ಜನರಿಗೆ ಬರೀ ಕಹಿಯನ್ನೇ ನೀಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ ಎಂದು ದೂರಿದರು.
ಬಿಜೆಪಿಯವರು ಹಿಜಾಬ್, ಕಾಶ್ಮೀರಿ ಫೈಲ್ಸ್, ಹಲಾಲ್, ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದರು.
ನಮ್ಮಲ್ಲೂ ಹಬ್ಬಗಳಲ್ಲಿ ಕುರಿ ಕಡಿದಾಗ ರಕ್ತ ಹೊರ ಹೋಗಲು ಬಿಡಲ್ವ? ಹಲಾಲ್ ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿ, ಅವರ ಪದ್ಧತಿ ಅವರು ಅನುಸರಿಸಲಿ, ನಮ್ಮ ಪದ್ಧತಿ ನಾವು ಅನುಸರಿಸೋಣ.
ಮನುಷ್ಯನ ಬದುಕಿಗೆ, ಜೀವನ ನಿರ್ವಹಣೆಗೆ ಸಂಬಂಧವಿಲ್ಲದ ವಿಷಯಗಳನ್ನು ಎತ್ತಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇದರಿಂದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ ಎಂದು ಸಿದ್ದು ಅಸಮಾಧಾನ ವ್ಯಕ್ತಪಡಿಸಿದರು.

