ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಅಂತರ ರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲ ಬೆಲೆ ಏರಿಳಿತಕ್ಕಿಂತಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದುರಾಸೆಯೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಎಲ್ಲ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ದೂರಿದರು.
ನಾವು ಕೇವಲ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲದ ವಿಚಾರವಾಗಿ ಮಾತನಾಡುತ್ತಿದ್ದು,
ಮೋದಿ ಹಾಗೂ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ಕಳೆದ ವಾರದಿಂದ ಡೀಸೆಲ್ ಬೆಲೆಯನ್ನು 8 ರೂ. ಏರಿಕೆ ಮಾಡಿದೆ. ಸಗಟು ಡೀಸೆಲ್ ವ್ಯಾಪಾರದಲ್ಲಿ 25 ರೂ. ಹೆಚ್ಚಳವಾಗಿದೆ ಎಂದು ಹೇಳಿದರು.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ 9.20 ರೂ ಹಾಗೂ ಡೀಸೆಲ್ ಮೇಲೆ 3.46 ರೂ.ನಷ್ಟು ಅಬಕಾರಿ ಸುಂಕ ಇತ್ತು. ಕಳೆದ ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ವಿಧಿಸಿದೆ. ಪೆಟ್ರೋಲ್ ಮೇಲೆ ಶೇ.203 ರಷ್ಟು ಹಾಗೂ ಡೀಸೆಲ್ ಮೇಲೆ ಬರೋಬ್ಬರಿ ಶೇ. 531 ರಷ್ಟು ಸುಂಕ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ ಕಚ್ಛಾ ತೈಲದ ಬೆಲೆಗಿಂತ ಈಗ ಸಾಕಷ್ಟು ಕಡಿಮೆ ಇದ್ದರೂ, ಇಂಧನ ದರ ಮಾತ್ರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇನ್ನು ಅಡುಗೆ ಅನಿಲದ ಬೆಲೆ ವಿಚಾರಕ್ಕೆ ಬಂದರೆ ಸರ್ಕಾರ ಅಲ್ಲೂ ಸುಲಿಗೆ ಮುಂದುವರಿಸಿ ಜನರನ್ನು ತೊಂದರೆ ಗೀಡುಮಾಡಿದೆ ಎಂದು ಡಿಕೆಶಿ ತಿಳಿಸಿದರು.
ಚುನಾವಣೆಯಲ್ಲಿ ಕೆಲವು ರಾಜ್ಯಗಳಲ್ಲಿ ಹಿನ್ನಡೆಯಾದ ಮಾತ್ರಕ್ಕೆ ನಾವು ಧೃತಿಗೆಡುವ ಅಗತ್ಯವಿಲ್ಲ. ಜನರ ಪರವಾಗಿ, ಅವರ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತೇವೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

