ಬೆಂಗಳೂರು: ಇಡೀ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಶಕ್ತಿ ತುಂಬಿದ್ದುದು ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಾದ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ ದೊಡ್ಡ ಉದ್ದಿಮೆಗಳನ್ನು ರಾಜ್ಯಕ್ಕೆ ತರಲಾಗಿತ್ತು ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಮಿಸಿದ್ದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ತೆರಳುತ್ತಾರೆ ಎಂದು ಹೇಳಿದ್ದರು.
ಆಗ ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ. ಆಂಧ್ರಪ್ರದೇಶದವರು ಕೂಡ ಕಳೆದ 15 ವರ್ಷದಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ನಮ್ಮ ಜತೆ ಸ್ಪರ್ಧೆಗೆ ನಿಂತಿದ್ದಾರೆ ಎಂದು ತಿಳಿಸಿದರು.
ದೊಡ್ಡ ಉದ್ಯಮಿಗಳನ್ನು ಅವರು ಆಕರ್ಷಿಸುತ್ತಿದ್ದಾರೆ, ಅದು ಅವರ ಕಾರ್ಯ. ನಾನು ಅದನ್ನು ಪ್ರಶ್ನಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರುವ ಉದ್ಯಮಿಗಳಿಗೆ ಆಂದ್ರದವರು ತಮ್ಮ ರಾಜ್ಯಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ.
ಈ ಸಮಯದಲ್ಲಿ ಮುಖ್ಯಮಂತ್ರಿಗಳಾಗಲಿ, ಬೇರೆ ಮಂತ್ರಿಗಳಾಗಲಿ ಯಾರೂ ಕೂಡ ನಮ್ಮ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ, ಇಲ್ಲೇ ಉದ್ಯೋಗ ಸೃಷ್ಟಿಸಿ ಯಾರನ್ನೂ ಬೇರೆ ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ ಎಂದು ಡಿಕೆಶಿ ಟೀಕಿಸಿದರು.
ಬಿಜೆಪಿಯವರು ಅವರಿಗೆ ಉತ್ತರ ನೀಡದೆ ನನ್ನ ಟ್ವೀಟ್ ಗೆ ಉತ್ತರಿಸುತ್ತಾರೆ. ಅವರು ಏನು ಬೇಕಾದರೂ ಹೇಳಲಿ. ನನಗೆ ಕರ್ನಾಟಕ ರಾಜ್ಯ ಮುಖ್ಯ. ಇಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವುದು ನಮ್ಮ ಮೊದಲ ಆದ್ಯತೆ ಎಂದರು.
ನವೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ರಾಜಧಾನಿ ಬೆಂಗಳೂರು. ಬಯೋಕಾನ್ ಮುಖ್ಯಸ್ಥೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಕೊಡಲು ಒಬ್ಬರಿಗೂ ಸಾಧ್ಯವಾಗಿಲ್ಲ. ಅವರನ್ನು ರಾಜಕೀಯ ಪಕ್ಷದ ಭಾಗ ಎಂಬುದಾಗಿ ಹೇಳಿದರು ಇದು ಸರಿಯೆ ಎಂದು ಪ್ರಶ್ನಿಸಿದರು.
ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು. ಕೋವಿಡ್ ಸಮಯದಲ್ಲಿ ಐಟಿ ಹಾಗೂ ಬಿಟಿ ಅವರಿಗೆ ಏನೆಲ್ಲ ಪರ್ಸೆಂಟೇಜ್ ನಿಗದಿ ಆಗಿತ್ತು ಎಂಬುದು ನಮಗೂ ಗೊತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

