ಬೆಂಗಳೂರು: ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ, ಅವರ ವಿರುಧ್ಧ ಹನುಮ ಜಯಂತಿ ದಿನದಿಂದಲೇ ನಮ್ಮ ನಿಜವಾದ ಹೋರಾಟ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಜನರು ಜೆಡಿಎಸ್ ನ ಲೆಕ್ಕವೇನು ಎಂಬುದನ್ನು 2023ಕ್ಕೆ ತೋರಿಸುತ್ತಾರೆ. ಆಗ 1994ರ ಇತಿಹಾಸ ಮರುಕಳಿಸಲಿದೆ, ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ಗಾಳಿಪಟದ ಶಕ್ತಿ 2023ಕ್ಕೆ ತೋರಿಸುತ್ತೇವೆ ಎಂದು ಹೇಳಿದರು.
ಮಿಷನ್ 123ರ ರೋಡ್ ಮ್ಯಾಪ್ ಸಿದ್ದವಿದೆ, ರಾಜ್ಯಕ್ಕಾಗಿರುವ ಅನ್ಯಾಯದ ರೋಡ್‍ಮ್ಯಾಪ್ ಮಾಡಿದ್ದೇವೆ. ಕನ್ನಡಿಗರ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ರೈತರ ಹೊಲಕ್ಕೆ ನೀರು ಹರಿಸುವ ಭರವಸೆಯೊಂದಿಗೆ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಲ್ಲಿ ಧ್ವನಿ ಇಲ್ಲದಂತಾಗಿದೆ. ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಫಲಾನಯನ ಮಾಡಿದರು. ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದು ನಾವು. ಹಿಜಾಬ್‍ನಿಂದ ಹಲಾಲ್‍ವರೆಗೂ ಭಾವನಾತ್ಮಕ ವಿಚಾರದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಕಾಪಾಡಲು ಜೆಡಿಎಸ್ ಧ್ವನಿ ಎತ್ತಲಿದೆ ಎಂದು ಎಚ್ ಡಿ ಕೆ ತಿಳಿಸಿದರು.
ಅಶಾಂತಿ ವಾತಾವರಣಕ್ಕೆ ಎಡೆ ಮಾಡಿಕೊಟ್ಟಾಗ ಧ್ವನಿ ಎತ್ತುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ನಾವು ಬಿಜೆಪಿ ವಿರುದ್ಧ ಸೆಟೆದು ನಿಂತು ಹೋರಾಟ ಮಾಡುತ್ತೇವೆ. ಯಾವುದೇ ಸೋಗು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಶ್ಮೀರಿ ಫೈಲ್‍ಗೆ ಶೇ.100ರಷ್ಟು ತೆರಿಗೆ ವಿನಾಯ್ತಿ ನೀಡಿದ ಸರ್ಕಾರ ಮುಖ್ಯಮಂತ್ರಿ, ಸಚಿವರ ಕೊಠಡಿಯಲ್ಲಿರುವ ಕಡತಗಳಿಗೆ ಶೇ.100ರಷ್ಟು ರಿಯಾಯ್ತಿ ಕೊಟ್ಟರೆ ರಾಜ್ಯ ಉದ್ದಾರವಾಗಲಿದೆ. ನಾವು ಯಾವುದೇ ಧರ್ಮ, ವರ್ಗದ ಪರ ಇಲ್ಲ. ನಾಡಿನ ಆರೂವರೆ ಕೋಟಿ ಜನರ ಪರವಾಗಿ ಧ್ವನಿ ಎತ್ತುತ್ತೇವೆ ಎಂದರು.
ನಿತ್ಯವೂ ಇಂಧನ ಬೆಲೆ ಏರುತ್ತಿದೆ. ಈಗಾಗಲೇ ಸೀಮೆಂಟ್, ಕಬ್ಬಿಣ, ಅಡುಗೆ ಅನಿಲ ದರ ಗಗನಕ್ಕೇರಿದ್ದು, ಬಡವರನ್ನು ಉಳಿಸಲು ನಾವು ಬೆಂಬಲ ಕೊಡುತ್ತೇವೆ. ಇದರ ವಿರುದ್ಧ ವಿಎಚ್‍ಪಿ ಹೋರಾಟ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

