ಭೂತದ ಬಾಯಲ್ಲಿ ಭಗವದ್ಗೀತೆ: ಎಚ್ ಡಿ ಕೆ ವಿರುದ್ಧ ರೇಣುಕಾಚಾರ್ಯ ಕಿಡಿ

ಬೆಂಗಳೂರು: ಪದ್ಮನಾಭನಗರದ ಅಣತಿ ಇಲ್ಲದೆ ಯಾವ ನೀವು ನಿರ್ಧಾರ ತೆಗೆದುಕೊಂಡಿದ್ದೀರಿ  ಮುಖ್ಯಮಂತ್ರಿಗಳ ಬಗ್ಗೆ ನಿಮಗೆ ಏನು ನೈತಿಕತೆ ಇದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್.ಡಿ.ಕೆ ಅವರನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಆರ್‌ಎಸ್‌ಎಸ್‌ ನಿಯಂತ್ರಣ ಮಾಡುತ್ತಿದೆ ಎಂದು ಹೇಳುವ ನೀವು ಯಾರ ಆಣತಿ ಕೇಳುವುದಿಲ್ಲವೆ ಎಂದು ಟ್ವೀಟ್ ನಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಶ್ರೀಮಂತರ ಪಕ್ಷ ಎನ್ನುವುದಾದರೆ ನೀವು ರಾಮನಗರದಲ್ಲಿ ರೇಷ್ಮೆ, ಹಾಸನದಲ್ಲಿ ಅಲೂಗಡ್ಡೆ ಬೆಳೆದು ಪಕ್ಷ ಸಂಘಟನೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ತಾಜ್‍ವೆಸ್ಟ್ ಎಂಡ್ ಹೊಟೆಲ್ ಅನ್ನೇ ಸಿಎಂ ಕಚೇರಿ ಮಾಡಿಕೊಂಡಿದ್ದ ನೀವು ಅಧಿಕಾರ ಇದ್ದಾಗ ಜನರ ಕೈಗೆ ಸಿಗದೆ , ಈಗ ಬಡವರ ಬಗ್ಗೆ ಅಣಿಮುತ್ತು ಉದುರಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಅವರೇ ನೀವು ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದೊಂದು ಬಾರಿ ಮಕ್ಮಲ್ ಟೋಪಿ ಹಾಕಿದ ಮಹಾನುಭಾವರು. 20-25 ಕ್ಷೇತ್ರಗಳನ್ನು ಗೆದ್ದು ತಮ್ಮ ಮನೆ ಬಾಗಿಲಿಗೆ ಬರಲಿ ಎಂದು ಕಾದು ಕುಳಿತಿದ್ದೀರಿ. ಈ ಬಾರಿ ಅದು ಕೂಡಾ ಕೈಗೆಟುಕುವ ಲಕ್ಷಣಗಳು ಕಾಣುತ್ತಿಲ್ಲ ಎಂದು ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.