ಹೆಚ್.ಡಿ.ಕೆ ವಿರುದ್ಧ ಅಶೋಕ್ ವಾಗ್ದಾಳಿ

ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು  ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಯಾರ ಕಡೆ ಇದ್ದಾರೆ ಎನ್ನುವುದೇ ಸಂಶಯ ಎಂದರು.

ಕುಮಾರಸ್ವಾಮಿ 2006 ರಲ್ಲಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದರು.ಇದಾದ ಬಳಿಕ, ಕಾಂಗ್ರೆಸ್ ಜೊತೆ ಹೋದರು. ಅವರು ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆಯೇ ಯಾವ ಪಕ್ಷವನ್ನೂ ಬಿಟ್ಟಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನಲ್ಲಿ ಎರಡು ಮನೆಗಳಂತಾಗಿದೆ, ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಇದ್ದಾರೆ. ಇವರ ನಿಲುವು ಏನು ಎಂಬುವುದು ಗೊತ್ತಿಲ್ಲ ಎಂದು ಹೇಳಿದರು.

ಹಿಜಾಬ್ ವಿಚಾರದಲ್ಲಿಯೂ ಅವರು ಯಾರ ಕಡೆ ಎನ್ನುವುದು ಗುಪ್ತವಾಗಿದೆ  ಅಲ್ಪಸಂಖ್ಯಾತರು ಅವರಿಗೆ ಮತ ನೀಡದಿದ್ದರೆ, ಆ ಪಕ್ಷವೇ ಇಲ್ಲದಂತೆ ಆಗಲಿದೆ ಎಂದು ಹೇಳಿದರು.

ಆಜಾನ್ ಕುರಿತು ಗೊಂದಲ ಮಾಡಿಕೊಳ್ಳುವ ಉದ್ದೇಶ ಇಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆಯೇ ಧ್ವನಿವರ್ಧಕ ಪ್ರಮಾಣ ನಿಗಧಿ ಮಾಡಬೇಕು. ಇದನ್ನು ಎಲ್ಲಾ ಸಮುದಾಯದವರು ಪಾಲನೆ ಮಾಡಬೇಕು ಎಂದು ಅಶೋಕ್ ತಿಳಿಸಿದರು.

ಹಲಾಲ್ ಕುರಿತು ಪ್ರತಿಕ್ರಿಯಿಸಿದ ಅವರು, ಯಾರ ಆಹಾರ ಪದ್ಧತಿ ಬಗ್ಗೆಯೂ ನಾವು ಪ್ರಶ್ನೆ ಮಾಡುವುದಿಲ್ಲ.ಅದು ಅವರ ಇಚ್ಛೆಯಾಗಿದೆ.ಆದರೆ, ಇದನ್ನೇ ತಿನ್ನಬೇಕೆಂದು ಒತ್ತಡ ಹೇರುವುದು ಸರಿಯಲ್ಲ ಎಂದು ತಿಳಿಸಿದರು.