ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ -ರಾಜಮಾತೆ

ಮೈಸೂರು: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿದರು.

ಅರಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  20 ನಿಮಿಷದ ಪ್ರವಾಸಕ್ಕೆ ರೋಪ್ ವೇ ಯಾಕೆ  ಬೇಕು ಎಂದು ಪ್ರಶ್ನಿಸಿದರು.

ಬೆಟ್ಟಕ್ಕೆ ಕಾರಿನಲ್ಲಿ, ಬೈಕ್ ನಲ್ಲಿ ಹೋಗೋಕೆ 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು.

ಚಾಮುಂಡಿ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಸಂರಕ್ಷಣೆ ಆಗಬೇಕು ಆದ್ದರಿಂದ ಬೆಟ್ಟದ ಮೇಲೆ ಟೌನ್ ಶಿಪ್ ನಿರ್ಮಾಣ ಆಗೋದು ಬೇಡ ಎಂದು ಸರ್ಕಾರಕ್ಕೆ ರಾಜಮಾತೆ ಸಲಹೆ ನೀಡಿದರು.

ಮೂಲ ನಿವಾಸಿಗಳನ್ನು ಬಿಟ್ಟರೆ ಅನ್ಯರ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಸಲಹೆ ನೀಡಿದರು.

ಲ್ಯಾನ್ಸೌಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ಕೆಡವಬಾರದು. ಹೀಗೆ ಕಟ್ಟಡಗಳನ್ನು ಕೆಡವುದರಿಂದ ಮೈಸೂರಿನ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಆಗುತ್ತದೆ. ಎರಡೂ ಕಟ್ಟಡಗಳನ್ನ ನಮಗೆ ಕೊಟ್ಟರೆ   ಅದನ್ನು ಯಥಾಸ್ಥಿತಿಯಲ್ಲಿ ನವೀಕರಣ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಇದೇ ಕಾರಣಕ್ಕೆ ಜಗನ್ಮೋಹನ ಅರಮನೆ, ರಾಜೇಂದ್ರ ವಿಲಾಸ ಅರಮನೆ ಯಥಾಸ್ಥಿತಿಯಲ್ಲಿ ನವೀಕರಣ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳ ವಿಚಾರದಲ್ಲಿ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಚಾಮುಂಡಿ ಬೆಟ್ಟದ ಮೇಲೆ 120 ಅಡಿ ಎತ್ತರದಲ್ಲಿರೋ ರಾಜೇಂದ್ರ ವಿಲಾಸ  ಅರಮನೆ  ಬಹಳ ದಿನಗಳಿಂದ ಪ್ರವಾಸಿಗರಿಗೆ ಮುಚ್ಚಿತ್ತು. ರಾಜೇಂದ್ರ ವಿಲಾಸ ಅರಮನೆ ಕಟ್ಟಡದ ಬಲಿಷ್ಠತೆ ಉತ್ತಮವಾಗಿದೆ.ತಜ್ಞರ ಅಭಿಪ್ರಾಯ ಪಡೆದು ನವೀಕರಣ ಮಾಡಲಾಗುವುದು.

ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣ ಮಾಡಲಾಗುವುದು. 1975ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು. 1995ರಿಂದ ಇದು ಮುಚ್ಚಲ್ಪಟ್ಟಿತ್ತು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಪ್ರಮೋದಾದೇವಿ ತಿಳಿಸಿದರು.

ಯಾವುದನ್ನೂ ಬದಲಾವಣೆ ಮಾಡಿಲ್ಲ, ಕೆಲವೊಂದು ಸೇವೆಗಳಲ್ಲಿ ಮಾರ್ಪಾಡು ಮಾಡಬಹುದಷ್ಟೇ. ಗೋಪುರದ ನವೀಕರಣ ಮಾಡುವುದು ಬಹಳ ಸವಾಲಾಗಿತ್ತು. ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಹೋಟೆಲ್ ಆಗಿ ಮುಂದುವರೆಸುವ ಉದ್ದೇಶವಿದೆ ಎಂದು ವಿವರ ನೀಡಿದರು.