ಬೆಂಗಳೂರು: ಈ ಬಾರಿ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರವನ್ನೇ ಧರಿಸಬೇಕು. ಹಿಜಾಬ್ ಧರಿಸಿ ಬಂದರೆ ಅಂತವರಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ ಎಂದು ಸೂಚಿಸಲಾಗಿದೆ.
ಏಪ್ರಿಲ್ 22ರಿಂದ ಮೇ 18 ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಲು ಸಿದ್ಧತೆ ನಡೆಸಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿತ್ತು.
ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿತ್ತು.
ಈಗ ಪಿಯುಸಿ ಪರೀಕ್ಷೆಗೂ ಇದೇ ಮಾದರಿಯನ್ನು ಅನುಸರಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಹೈಕೋರ್ಟ್ ಆದೇಶದ ಪ್ರಕಾರ, ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರಲು ನಿರ್ಬಂಧ ಹಾಕಲಾಗಿದೆ.
ನ್ಯಾಯಾಲಯದ ಆದೇಶವನ್ನು ಎಲ್ಲ ಕಾಲೇಜುಗಳೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು.
ಇಲಾಖೆ ಹೊರಡಿಸುವ ಅಧಿಸೂಚನೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಈಗಾಗಲೇ ಅಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ಕೊಟ್ಟಿದ್ದಾರೆ.

