ಸರ್ಕಾರ ಯಾವದೇ ಧರ್ಮದ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ – ಡಾ.ಕೆ.ಸುಧಾಕರ್

ಬೆಂಗಳೂರು: ಯಾವದೇ ಧರ್ಮದ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಅಂತಹ ಆಲೋಚನೆಯೂ ಸಹ ನಮ್ಮ ಮುಂದೆ ಇಲ್ಲ ಎಂದು ತಿಳಿಸಿದರು

ನಮ್ಮ ಸರ್ಕಾರ ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ಕಾಣುತ್ತದೆ. ಯಾರು ಮೇಲೂ ಅಲ್ಲ, ಕೀಳೂ ಅಲ್ಲ. ಅವರವರ ಧರ್ಮ ಮತ್ತು ಆಚರಣೆಗೆ ಕಾನೂನಿನಲ್ಲಿ ಅವಕಾಶವಿದೆ. ಭಾವೈಕ್ಯತೆಗೆ ಧಕ್ಕೆ ತರುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನೊಬ್ಬ ಸಚಿವನಾಗಿ ಸರ್ಕಾರದ ನಿಲುವು ಏನೆಂಬುದನ್ನು ಹೇಳುತ್ತೇನೆ. ಈಗ ನಡೆಯುತ್ತಿರುವ ಘಟನೆಗಳಿಗೂ, ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಜಾಬ್, ಹಲಾಲ್ ವಿಷಯಗಳಲ್ಲಿ ಸರ್ಕಾರದ ಪಾತ್ರವಿಲ್ಲ. ಆದರೆ, ಕೆಲವು ಮಾಧ್ಯಮಗಳು ಇದನ್ನು ಸರ್ಕಾರದ ಪ್ರಾಯೋಜಿತ ಎಂದು ಹೇಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಒಂದು ಧರ್ಮಕ್ಕೆ ಸೀಮಿತವಲ್ಲ ಎಲ್ಲ ಧರ್ಮಗಳನ್ನೂ ಗೌರವದಿಂದ ಕಾಣುತ್ತದೆ. ಪ್ರತಿ ಜಾತಿಗೂ ಸಹ ನಾವು ಗೌರವ ಕೊಡುತ್ತಿದ್ದೇವೆ. ಜಾತ್ಯತೀತ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದರು.

ಹಲಾಲ್ ನಿಷೇಧದ ಹಿಂದೆ ಯಾರಿದ್ದಾರೋ ನನಗೂ ಗೊತ್ತಿಲ್ಲ. ಆದರೆ ಇದರಲ್ಲಿ ಸರ್ಕಾರದ ಪಾತ್ರ ಎಳ್ಳಷ್ಟೂ ಇಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಸುಧಾಕರ್ ತಿಳಿಸಿದರು.

ದೇಶದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ  ಪ್ರತಿಕ್ರಿಯಿಸಿದ ಸುಧಾಕರ್, ಪ್ರತಿಯೊಂದು ಸೋಂಕು ಮ್ಯುಟೇಷನ್ ಆಗುತ್ತಲೇ ಇರುತ್ತದೆ ಅದರ ಗುಣವೇ ಹಾಗೆ ಎಂದು ಹೇಳಿದರು.

ನಾವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ವಸ್ತುಸ್ಥಿತಿಯ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.