ಮೈಸೂರು,ಏ.6: ಗೃಹ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು. ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ಕೆ ಗೃಹ ಸಚಿವರೇ ಬೇಜವಾಬ್ದಾರಿ ಹೇಳಿಕೆ ನೀಡಿದಾಗ ಸಮಾಜದ ಸ್ವಾಸ್ಥ್ಯ ಯಾವ ರೀತಿ ಆಗಲಿದೆ ಎಂದು ಯೋಚಿಸಿ ಎಂದು ಕಳವಳ ವ್ಯಕ್ತಪಡಿಸಿದರು.
ಗೃಹ ಸಚಿವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಮೌನವಹಿಸಿದ್ದಾರೆ. ಮುಖ್ಯಮಂತ್ರಿಗಳ ಮೌನ ರಾಜ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉರ್ದು ಮಾತಾಡಿಲ್ಲವೆಂದು ಚಂದ್ರುಗೆ ಚೂರಿ ಹಾಕಿದರು ಅಂತ ಗೃಹ ಸಚಿವರೇ ಹೇಳಿದ್ದಾರೆ. ಈ ರೀತಿ ಗೃಹ ಸಚಿವರ ಹೇಳಿಕೆ ಬಂದ ಮೇಲೆ ಹಿಂದೂ ಮುಸ್ಲಿಂ ಸಮಾಜದ ನಡುವೆ ಸಂಘರ್ಷ ಆಗುವುದಿಲ್ಲವೆ ಎಂದು ಆತಂಕ ಪಟ್ಟರು.
ಹಿಂದೂ ಸಮಾಜದ ಹುಡುಗ ಅನ್ನೋ ಪದ ಗೃಹಸಚಿವರ ಬಾಯಲ್ಲಿ ಬರಲಿಲ್ಲ. ಇವರ ಹಿಂದೂತ್ವ ಏನು ಅನ್ನೋದನ್ನು ನಾವು ಇಲ್ಲೇ ಅರ್ಥ ಮಾಡಿಕೊಳ್ಳಬಹುದು ಎಂದು ವ್ಯಂಗ್ಯ ವಾಡಿದರು.
ಕೊಲೆ ಪ್ರಕರಣದಲ್ಲಿ ಮುಸ್ಲಿಂ ಸಮಾಜದ ಯುವಕರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ,ಈ ಪ್ರಕರಣದಲ್ಲಿ ಯಾವುದೇ ಸಮಾಜದವರಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಸರ್ಕಾರ ನಡೆಸುವವರು ಪ್ರಾರಂಭಿಕ ಹಂತದಲ್ಲಿ ಇಂತಹ ಸಮಸ್ಯೆಗಳನ್ನು ಚಿವುಟಿ ಹಾಕದಿದ್ದಲ್ಲಿ ಎಲ್ಲೋ ಒಂದು ಕಡೆ ದೊಡ್ಡ ಮಟ್ಟದ ಅನಾಹುತಗಳು ಕಾದಿರಲಿದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಎಚ್ ಡಿ ಕೆ ಸಲಹೆ ನೀಡಿದರು.
ಇತ್ತೀಚಿನ ಸಿನಿಮಾಗಳೇ ಇಂತಹ ಘಟನೆ ಗಳಿಗೆ ಪ್ರೇರಣೆ. ಸಿನಿಮಾ ವೈಭವೀಕರಣ ಹೆಚ್ಚಾಗಿದೆ. ಇದರಿಂದ ಯವಜನ ಮಚ್ಚು -ಲಾಂಗು ಹಿಡಿಯುತ್ತಿದ್ದಾರೆ. ಯಾರೇ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

