ಬೆಂಗಳೂರು: ಉರ್ದು ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಚಂದ್ರು ಎಂಬ ಯುವಕನನ್ನು ಚೂರಿಯಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕನ್ನಡ ಮಾತನಾಡುತ್ತಿದ್ದ ಚಂದ್ರುವನ್ನು ಕೆಲವು ದುಷ್ಕರ್ಮಿಗಳು ಉರ್ದುವಿನಲ್ಲಿ ಮಾತನಾಡಬೇಕೆಂದು ಆಗ್ರಹಿಸಿದ್ದಾರೆ. ಆ ಭಾಷೆ ಬರುವುದಿಲ್ಲ ಎಂದು ಬೇಡಿಕೊಂಡರೂ ಕೇಳದೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದರ ಹಿಂದೆ ಕೆಲವು ಸಮಾಜಘಾತುಕ ಶಕ್ತಿಗಳು ಇರುವ ಸಾಧ್ಯತೆಯಿದೆ ಎಂದು ತಿಳಿಸಿದರು.
ತಲೆಮರೆಸಿಕೊಂಡಿರುವವರನ್ನು ಬಂಧಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆಹಾರ ತರಲು ಬಂದಿದ್ದ ಚಂದ್ರವಿನ ದ್ವಿಚಕ್ರ ವಾಹನ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದಿದೆ. ದುಷ್ಕರ್ಮಿಗಳು ಆತನಿಗೆ ಉರ್ದುವಿನಲ್ಲಿ ಮಾತನಾಡಬೇಕೆಂದು ಧಮ್ಕಿ ಹಾಕಿದ್ದಾರೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ ಎಂದು ಹೇಳಿದರೂ ಇರಿದು ಕೊಲೆ ಮಾಡಿದ್ದಾರೆ ನೀಚರು. ಈ ಸಂಬಂಧ ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ಕೊಲೆಯಾಗಿರುವವನು ದಲಿತ ಯುವಕ ಎಂದು ಮಾಹಿತಿ ನೀಡಿದರು.
ಮಾವಿನ ಹಣ್ಣನ್ನು ಮುಸ್ಲಿಮರಿಂದ ತೆಗೆದುಕೊಳ್ಳದಂತೆ ಕೆಲವರು ಅಭಿಯಾನ ಮಾಡುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ಕುರಿತು ಅಲ್ಲಿಲ್ಲಿ ಹಲವರಿಂದ ಹೇಳಿಕೆಗಳು ಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ ಎಂದರು.
ಕಾನೂನು ಬಾಹಿರ, ಕಾನೂನು ಸುವ್ಯವಸ್ಥೆ ಹದಗೆಡುವ ಸಂಗತಿ ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರ ಹಾಗೂ ಗೃಹ ಇಲಾಖೆ ಇದನ್ನು ಕಣ್ಣಿಟ್ಟು ನೋಡುತ್ತಿದೆ ಎಂದು ಸಚಿವರು ಹೇಳಿದರು.
ವಿರೋಧ ಪಕ್ಷದ ನಾಯಕರಿಬ್ಬರು ಅಲ್ಪಸಂಖ್ಯಾತರ ಮತಕ್ಕಾಗಿ ಬಲೆ ಹಾಕಿಕೊಂಡು ಕೂತಿದ್ದಾರೆ. ಅವರಿಗೆ ಜನರ ನೆಮ್ಮದಿ ಬೇಡವಾಗಿದೆ ಎಂದು ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

