ಬೆಂಗಳೂರು: ಉರ್ದುವಿನಲ್ಲಿ ಮಾತನಾಡಲಿಲ್ಲವೆಂದು ಚಂದ್ರು ಎಂಬುವರನ್ನು ಕೊಲೆ ಮಾಡಿರುವುದರ ಹಿಂದೆ ಸಮಾಜಘಾತುಕ ಶಕ್ತಿಗಳ ಕೈವಾಡವಿದೆ, ಅವು ಕರ್ನಾಟಕವನ್ನು ಕಾಶ್ಮೀರ ಮಾಡಲು ಹೊರಟಿವೆ ಎಂದು ಬಿಜೆಪಿಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಉರ್ದು ಮಾತನಾಡಲಿಲ್ಲ ಎಂಬುದಕ್ಕೆ ಗೋರಿಪಾಳ್ಯದಲ್ಲಿ ಕೊಲೆ ಮಾಡುತ್ತಾರೆ ಎಂದರೆ ಏನರ್ಥ, ನಾವು ಯಾವ ದೇಶದಲ್ಲಿ ಇದ್ದೇವೆ ಎಂಬುದೇ ಅನುಮಾನವಾಗುತ್ತಿದೆ ಎಂದು ಹೇಳಿದರು
ಇಂಥ ಮನಸ್ಥಿತಿಯವರನ್ನು ಏನು ಮಾಡಬೇಕೆಂದು ಪ್ರಶ್ನಿಸಿದರು.
ಇದು ಭಾರತ. ಇದನ್ನು ಅಫ್ಘಾನಿಸ್ಥಾನ, ಪಾಕಿಸ್ತಾನ ಮಾಡಲು ಬಿಡುವುದಿಲ್ಲ. ನಿಮಗೆ ನಿಮ್ಮ ಭಾಷೆ ಮೇಲೆ ಅಭಿಮಾನವಿದ್ದರೆ ನಮಗೂ ನಮ್ಮ ಭಾಷೆ ಮೇಲೆ ಅಭಿಮಾನವಿದೆ. ನಿಮ್ಮ ಮತಾಂಧ ಶಕ್ತಿಯನ್ನು ಇಲ್ಲಿ ತೋರಿಸುವ ಅಗತ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಚಂದ್ರು ದಲಿತ ಎಂಬ ಕಾರಣಕ್ಕಾಗಿ ಯಾವ ಬುದ್ದಿಜೀವಿಗಳೂ ಮಾತನಾಡುತ್ತಿಲ್ಲ. ಅದೇ ಬೇರೆ ಧರ್ಮದವರು ಸತ್ತಿದ್ದರೆ ಇಷ್ಟರಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ಮೌನವಾಗಿರುವುದರ ಹಿಂದಿನ ಉದ್ದೇಶವೇನು ಎಂದು ತರಾಟೆಗೆ ತೆಗೆದುಕೊಂಡರು.
ಈಗ ಗೋರಿಪಾಳ್ಯದಲ್ಲಿ ನಡೆದಿದೆ. ಮೊನ್ನೆ ಕಾಶ್ಮೀರದಲ್ಲಿ ನಡೆದಿದೆ ನಾಳೆ ದೇಶದಲ್ಲೆಲ್ಲಾದರೂ ನಡೆಯಬಹುದು. ಇದನ್ನು ನಾನು ಖಂಡಿಸುತ್ತೇನೆ ಎಂದು ರವಿ ಹೇಳಿದರು.
ಇದರ ಬಗ್ಗೆ ಬುದ್ದಿಜೀವಿಗಳು ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸತ್ತವನು ಹಿಂದೂವಾದರೆ ಯಾರಲ್ಲೂ ಕಣ್ಣೀರು ಬರುವುದಿಲ್ಲ. ಸತ್ತವರು ಹಿಂದೂ ಆಗಿದ್ದರೆ ಸಿದ್ದರಾಮಯ್ಯ ಸಂತಾಪ ಸೂಚಿಸುವುದಿಲ್ಲ. ಅವರ ಆಷಾಡಬೂತಿ ತನಕ್ಕೆ ಧಿಕ್ಕಾರ ಹೇಳುತ್ತೇನೆ. ಶಾದೀಭಾಗ್ಯ ಯೋಜನೆ ತಂದು ಸಮಾಜ ಒಡೆದಿದ್ದು ಇದೇ ಸಿದ್ದರಾಮಯ್ಯನವರು ಎಂದು ವಾಗ್ದಾಳಿ ನಡೆಸಿದರು.
ನಮಗೆ ಜಾತಿ ಒಡೆಯುವ ಅವಶ್ಯಕತೆ ಇಲ್ಲ. ಅವರು ಪ್ರಮಾಣೀಕರಾಗಿದ್ದರೆ ಹಿಜಾಬ್ ಸಂಘರ್ಷಕ್ಕೆ ಕಾನೂನಿನ ನೆರವು ಒದಗಿಸಿದ್ದವರು ಯಾರು ಎಂದು ಹೇಳಲಿ…? ಎಲ್ಲ ವಕೀಲರೂ ಕಾಂಗ್ರೆಸ್ ಬೆಂಬಲಿತರೇ ಇದ್ದರು. ಕಾಂಗ್ರೆಸ್ ನಿಲುವು ಯಾವ ಕಡೆ ಎಂದು ಪ್ರಶ್ನೆ ಮಾಡಿದರು.
ಮುಸ್ಲಿಮರು ಮಾವು ತೆಗೆದುಕೊಳ್ಳದಂತೆ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ನಿಲುವನ್ನು ನಮ್ಮ ಪಕ್ಷ ಸಮರ್ಥಿಸಿಕೊಳ್ಳೋದಿಲ್ಲ ಎಂದು ಸ್ಪಷ್ಟಪಡಿಸಿದರು. ಎಚ್.ಡಿ.ಕುಮಾರಸ್ವಾಮಿ ಅವರು ಹಿಜಾಬ್, ಸಮವಸ್ತ್ರ ಬಗ್ಗೆ ತಮ್ಮ ನಿಲುವು ಮೊದಲು ಸ್ಪಷ್ಟ ಪಡಿಸಲಿ. ಅವರು ಟೀಕೆ ಮಾಡಲೇಬೇಕು. ಅವರಿಗೆ ಹೊಗಳುವ ಔದಾರ್ಯತೆ ಇಲ್ಲ ಎಂದು ಸಿ.ಟಿ.ರವಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

