ಮರ್ಯಾದಾ ಪುರಷೋತ್ತಮನಿಗೆ ಕಳಂಕ ತರಬೇಡಿ -ಹೆಚ್.ಡಿ.ಕೆ

ಬೆಂಗಳೂರು: ಶ್ರೀರಾಮನ ಹೆಸರು ಇಟ್ಟುಕೊಂಡು ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ ಅಂತಹ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆಲ ಸಂಘಟನೆಗಳ ವಿರುದ್ಧ ಕಿಡಿ ಕಾರಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಕೆಲವರು ರಾಮಸೇನೆ, ಮತ್ಯಾವುದೋ ಸೇನೆ ಅಂತ ಹೆಸರು ಇಟ್ಟಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ‌ ಎಂದು ದೂರಿದರು.

ಅಂಥವರು ರಾವಣಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದೆ ಪದೇ ಬಿಜೆಪಿ ಸಹ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿದೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ ಎಂದು ಬೇಸರಪಟ್ಟರು.

ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ, ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದು ಧರ್ಮ‌ ಕಾಪಾಡಿದಂತೆ ಆಗುತ್ತದೆ ಎಂದು ಅವರು ಹೇಳಿದರು.

ನಮ್ಮ‌ಬಾಲ್ಯದಲ್ಲಿ ಬೆಳಗ್ಗೆ ದೇವಸ್ಥಾನದಲ್ಲಿ ಸುಪ್ರಭಾತ ಕೇಳಿಸುತ್ತಿತ್ತು. ಘಂಟೆ ನಾದ ಮೊಳಗುತ್ತಿತ್ತು. ಆ ಗಂಟೆನಾದ ಕೇಳಿದರೆ ನಮ್ಮ ಮೈ ನವಿರೇಳುತ್ತಿತ್ತು. ಈಗ ಅದು ಮರೆಯಾಗಿದೆ ಎಂದು ಹೇಳಿದರು

ಮತ್ತೊಂದು ಧರ್ಮ ಅಥವಾ ಜಾತಿಯನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವುದು ಬೇಡ. ಅವರ ನಂಬಿಕೆಗಳಿಗೆ ನೋವುಂಟು ಮಾಡುವುದು ಬೇಡ ಎಂದರು.

ಶಾಲೆಗಳಲ್ಲಿ ಭಗವದ್ಗೀತೆ ಓದಿಸಿದರೆ ಪ್ರಯೋಜನ ಇಲ್ಲ. ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದನ್ನು ಗಲಾಟೆಕೋರರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ  ತೀಕ್ಷ್ಣವಾಗಿ ಹೇಳಿದರು.