ಆಜಾನ್ ಬಗ್ಗೆ ಹೊಸ ಕಾನೂನು ತಂದಿಲ್ಲ ಗೊಂದಲ ಸೃಷ್ಟಿಸಬೇಡಿ -ಬೊಮ್ಮಾಯಿ

ಬೆಂಗಳೂರು: ಆಜಾನ್ ವಿಚಾರದಲ್ಲಿ ಸರ್ಕಾರ ಹೊಸ ಕಾನೂನು ತಂದಿಲ್ಲ, ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಯಾವುದೇ ಸಂಘಟನೆಯಾಗಲಿ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಇದನ್ನು ಉಲ್ಲಂಘಿಸಿದರೆ  ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಸರ್ಕಾರದ ದೃಷ್ಟಿಯಲ್ಲಿ ಎಲ್ಲಾ ಜಾತಿ-ಧರ್ಮದವರು ಒಂದೇ ಎಂದು  ಹೇಳಿದರು.

ಈಗ ಹಿಂದೂ-ಮುಸ್ಲಿಂ ಧಾರ್ಮಿಕ ವಿಚಾರಗಳ ಬಗ್ಗೆ ನಡೆಯುತ್ತಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಇವೆಲ್ಲಾ ಹೊಸ ವಿಚಾರಗಳೇನಲ್ಲ, ಹಲವಾರು ವರ್ಷಗಳಿಂದ ಇವೆ ಎಂದರು.

ಕೆಲವು ಆದೇಶಗಳನ್ನು 2001, 2002 ರ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಮಾಡಿದ್ದೇವೆ. ಇಂದಿನ ಬಿಜೆಪಿ ಸರ್ಕಾರ ಹೊಸ ಆದೇಶವನ್ನೇನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನ,ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ಆದೇಶವಿದೆ, ಎಷ್ಟು ಡೆಸಿಮಲ್ ವರೆಗೆ ಬಳಸಬೇಕು ಎಂಬ ಬಗ್ಗೆ ಹಿಂದಿನ ಆದೇಶವಿದ್ದು ಹಂತಹಂತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.

ಇದುವರೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರಿಂದ ನನಗೆ ಸೂಚನೆ ಬಂದಿಲ್ಲ ಎಂದು ಇದೇ ವೇಳೆ ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.