ಮೈಸೂರು: ಎಲ್ಲರಿಗೂ ಸಮಾನ ನ್ಯಾಯವನ್ನು ಕೊಡಲು ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಸರ್ಕಾರಕ್ಕೆ ಪ್ರಚಾರದ ಹುಚ್ಚಿಲ್ಲ, ಭಾವನೆಗಳನ್ನು ಅರ್ಥಮಾಡಿಕೊಂಡು ಸಾಮಾಜಿಕ ನ್ಯಾಯದ ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ಆಲ್ ಖೈದಾ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ನವರು ಯಾವಾಗ ಬಿಜೆಪಿ ಸರ್ಕಾರವನ್ನು ಹೊಗಳಿದ್ದಾರೆ ಎಂದು ಪ್ರಶ್ನಿಸಿದರು.
ಅದು ಯಾವಾಗ ಸಿದ್ದರಾಮಯ್ಯ ಆಗಲೀ ಡಿಕೆಶಿಯವರಾಗಲಿ ಬಿಜೆಪಿ ಸರ್ಕಾರ ಸರಿಯಾದ ರೀತಿಯಲ್ಲಿ ಸಾಗುತ್ತಿದೆ. ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಸರ್ವರನ್ನೂ ಒಳಗೊಂಡು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಕಠಿಣವಾದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಸಮರ್ಥಿಸಿಕೊಂಡರು.
ಹಿಜಾಬ್ ಸೇರಿದಂತೆ ಯಾವುದೇ ಸಮಸ್ಯೆಗಳು ಬಂದರೂ ಕಾನೂನು ರೂಪದಲ್ಲಿ ಏನು ಪರಿಹಾರವಾಗತ್ತೋ ನ್ಯಾಯಮೂರ್ತಿಗಳು, ನ್ಯಾಯಾಲಯ ಏನು ಆದೇಶ ಕೊಡತ್ತದೂ ಅದೇ ಪ್ರಕಾರ ಅನುಷ್ಠಾನಗೊಳಿಸಲಾಗುತ್ತದೆ.
ಎಲ್ಲಾ ತೊಡಕುಗಳನ್ನು, ಆರೋಪಗಳನ್ನು ಎದುರಿಸಿದ್ದೇವೆ.ಬೊಮ್ಮಾಯಿಯವರು ವ್ಯವಸ್ಥಿತವಾದ ಒಂದು ಯೋಜನಾ ಬದ್ಧವಾದ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.
ಏ.14ಕ್ಕೆ ಮೀಸಲಾತಿ ವಿಚಾರಕ್ಕೆ ಗಡುವು ನೀಡಿದ್ದಾರೆ. ಸರ್ಕಾರದಿಂದ ವಿಳಂಬ ಯಾಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೆಲವರು ಹಿಂದುಳಿದ ವರ್ಗ 2ಎಗೆ ಸೇರಿಸಿ ಎಂದು ಹೇಳಿರುತ್ತಾರೆ, ಕೆಲವರು ಪರಿಶಿಷ್ಟ ಪಂಗಡಕ್ಕೆ , ಹೀಗೆ ಬೇರೆ ಬೇರೆ ಸಮುದಾಯದವರು, ಅನೇಕ ಸಾಧು ಸಂತರು ತಮ್ಮ ಭಾವನೆಗಳನ್ನು ಸರ್ಕಾರಕ್ಕೆ ತಿಳಿಸಿದ್ದಾರೆ.
ಸರ್ಕಾರದ ಹಂತದಲ್ಲಿ ಎಲ್ಲವೂ ಪರಿಶೀಲನೆಯಲ್ಲಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯದ ನೆಲೆಯಲ್ಲಿ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಜಾತಿವಾರು ಜನಗಣತಿ ಆಯೋಗ ರಚನೆ ಮಾಡುವ ಕುರಿತು ಸರ್ವಪಕ್ಷಗಳು ನಡೆಸಿದ ಸಭೆಯಲ್ಲಿ ತೀರ್ಮಾನವಾಗಿದೆ. ಶೀಘ್ರದಲ್ಲಿಯೇ ಮಾಡುತ್ತೇವೆ ಎಂದು ಸಚಿವರು ಹೇಳಿದರು.

