ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್( ಬೂಸ್ಟರ್ ) ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕಾಕರಣಕ್ಕೂ ವೇಗ ನೀಡಲಾಗಿದೆ, ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ಲಸಿಕಾಕರಣವನ್ನು ಚುರುಕುಗೊಳಿಸಿರುವುದರಿಂದ, ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.
ಇದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60+ ವಯಸ್ಸಿನ ನಾಗರಿಕರಿಗೂ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಮಾಡಿಕೊಟ್ಟ ಈ ಅವಕಾಶವನ್ನು ಎಲ್ಲರೂ ತಪ್ಪದೇ ಬಳಸಿಕೊಂಡು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು.ಎರಡು ಡೋಸ್‍ಗಳಂತೆ ಮುನ್ನೆಚ್ಚರಿಕೆ ಡೋಸ್ ಕೂಡ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಸುಧಾಕರ್ ಮನವಿ ಮಾಡಿದ್ದಾರೆ.

