ನವದೆಹಲಿ: ದೇಶದಿಂದ ಕೊರೊನಾ ಮಹಾಮಾರಿ ಹೋಗೆಬಿಟ್ಟಿತು ಎಂದು ಜನತೆ ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ.
ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಹೊಸ ಮಾದರಿಯ ಎಕ್ಸ್ ಇ ಎಂಬ ಸೋಂಕು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಂಡಿದ್ದು, ಇದು ನಾಲ್ಕನೇ ಅಲೆಯ ಮುನ್ಸೂಚನೆ ಇರಬಹುದು ಎನ್ನಲಾಗುತ್ತಿದೆ.
ಮೂರು ದಿನಗಳ ಹಿಂದೆ ಮುಂಬೈನಲ್ಲಿ ಇದೇ ಮಾದರಿಯ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು. ಆದರೆ ದೃಢಪಟ್ಟಿರಲಿಲ್ಲ.
ಈಗ ಗುಜರಾತ್‍ನಲ್ಲಿ ಸೋಂಕು ಕಾಣಿಸಿಕೊಂಡಿರುವುದು ಜನತೆಯಲ್ಲಿ ಭೀತಿ ಹುಟ್ಟಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಎಕ್ಸ್ ಇ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹಬ್ಬುತ್ತದೆ ಎಂದು ಎಚ್ಚರಿಸಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನತೆ ಗೊಂದಲಕ್ಕೆ ಒಳಗಾಗಬಾರದೆಂದು ಸಲಹೆ ಮಾಡಿದೆ.
ಗುಜರಾತ್‍ನ ವ್ಯಕ್ತಿಯೊಬ್ಬರಿಗೆ ಕಳೆದ ವಾರ ಸೋಂಕು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಇದು ದೃಢಪಟ್ಟಿದೆ ಆದರೆ ಅಲ್ಲಿನ ಸರ್ಕಾರ ಅಧಿಕೃತವಾಗಿ ಇದನ್ನು ಬಹಿರಂಗಪಡಿಸಿಲ್ಲ.
ನಾವು ಕೆಲವು ಸ್ಯಾಂಪಲ್‍ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೆವು. ಇದರಲ್ಲಿ ಹೊಸ ಮಾದರಿಯ ಸೋಂಕು ಇರುವುದು ದೃಢಪಟ್ಟಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆದರೂ ನಿಯಮಗಳ ಪ್ರಕಾರ ನಾವು ಇದನ್ನು ಖಚಿತಪಡಿಸುವಂತಿಲ್ಲ. ಕೇಂದ್ರ ಸರ್ಕಾರಕ್ಕೆ ಇದನ್ನು ಕಳುಹಿಸಿಕೊಟ್ಟಿದ್ದೇವೆ. ನಂತರವೇ ಇದು ದೃಢಪಡಲಿದೆ ಎಂದಿದ್ದಾರೆ.

