ಬೆಂಗಳೂರು: ಪೊಲೀಸ್ ಇಲಾಖೆಯ 545 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪ ಕುರಿತು ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಈಗಾಗಲೇ ಪರೀಕ್ಷೆ ನಡೆದು ತಾತ್ಕಾಲಿಕ ನೇಮಕಾತಿ ಪಟ್ಟಿಯೂ ಪ್ರಕಟವಾಗಿದೆ ಎಂದು ಹೇಳಿದರು
ಇದೆಲ್ಲ ಆದ ನಂತರ ಪರೀಕ್ಷೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು.
ಕಲಬುರ್ಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‍ಐಆರ್ ಸಹ ದಾಖಲಾಗಿದೆ. ಕಲಬುರ್ಗಿಯ ಜ್ಞಾನಜ್ಯೋತಿ ಪ್ರೌಢಶಾಲೆಯ ಕೇಂದ್ರದಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ ಎಂದು ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿಯ ಒಂದು ತಂಡವನ್ನು ಕಲಬುರ್ಗಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿರೇಶ್ ಎಂಬ ಅಭ್ಯರ್ಥಿ ಬರೆದಿದ್ದ ಪರೀಕ್ಷೆಯ ಅಭ್ಯರ್ಥಿಯ ಒಎಂಆರ್ ಶೀಟ್‍ನಲ್ಲಿ 21 ಅಂಕ ಬಂದಿದ್ದರೆ, ಮೌಲ್ಯಮಾಪನ ಮಾಡಿದ ಮೂಲ ಪ್ರತಿಯಲ್ಲಿ 101 ಅಂಕಗಳು ಬಂದಿದೆ.
ಈ ಸಂಬಂಧ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಪ್ರತಿಭಾವಂತರು ಹಾಗೂ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪದ ಸತ್ಯಸತ್ಯಾತೆ ಹೊರಬರಬೇಕೆಂದು ಸಮಗ್ರ ತನಿಖೆಗೆ ವಹಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಆದ್ಯತೆ ಮೇರೆಗೆ ತ್ವರಿತ ಗತಿಯಲ್ಲಿ ಸಿಐಡಿ ತನಿಖೆ ನಡೆಸಲಿದೆ. ಈ ಅಕ್ರಮದ ಹಿಂದೆ ಯಾರಿದ್ದಾರೆ. ಪೊಲೀಸರ ಕೈವಾಡವೂ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಸಮರ್ಥವಾಗಿ ನಿರ್ವಹಣೆಯಾಗುತ್ತಿದೆ.
ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಈ ಬಗ್ಗೆ ಪ್ರಮಾಣ ಪತ್ರ ಪಡೆಯಬೇಕಾಗಿಲ್ಲ ಎಂದು ಗೃಹ ಸಚಿವರು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗೃಹ ಸಚಿವರನ್ನು ಡಮ್ಮಿ ಮಾಡಿ ನಿವೃತ್ತ ಪೊಲೀಸ್ ಅಧಿಕಾರಿ ಮೂಲಕ ಗೃಹ ಇಲಾಖೆ ನಿರ್ವಹಿಸಲಾಗುತ್ತಿತ್ತು.ಅಂದು ವರ್ಗಾವಣೆಗಳಿಗೆ ಬ್ರೋಕರ್‍ಗಳಿದ್ದರು. ಈಗ ಅಂತಹದ್ದು ಏನೂ ಇಲ್ಲ ಎಂದು ಸಚಿವರು ಹೇಳಿದರು.

