ಸರ್ಕಾರವನ್ನು ಸಿಎಂ ಸಂಘ ಪರಿವಾರಕ್ಕೆ ಹೊರಗುತ್ತಿಗೆ ನೀಡಿದ್ದಾರೆ -ಸಿದ್ದು ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ದ್ವೇಷದ ಗಲಭೆಗಳಿಂದ ಕಾನೂನು ಸುವ್ಯವಸ್ಥೆ ಕುಸಿದು ನಾಗರಿಕ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸರ್ಕಾರವನ್ನು ಸಂಘ ಪರಿವಾರಕ್ಕೆ ಹೊರಗುತ್ತಿಗೆ ನೀಡಿ, ಪುಂಡರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಂತೆ ಕಾಣುತ್ತಿದೆ ಎಂದು ವ್ಯಂಗ್ಯ ವಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಸಂಪುಟ ಇಲ್ಲವೇ ಪಕ್ಷದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸರ್ಕಾರವನ್ನು ಸಂಘಪರಿವಾರಕ್ಕೆ ಅಡವಿಟ್ಟರೆ ತಮ್ಮ ಕುರ್ಚಿ ಉಳಿಸಿಕೊಳ್ಳಬಹುದು ಎಂದು  ಕನಸು ಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿಯನ್ನೂ ಕಿತ್ತುಕೊಳ್ಳಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಸಿದ್ದು ಎಚ್ಚರಿಸಿದರು.

ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಹೇಳಿಕೆಯನ್ನು ಧಿಕ್ಕರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮೊದಲಾದ ಕೂಗುಮಾರಿಗಳ ಬಾಯಿಮುಚ್ಚಿಸಲಾಗದಷ್ಟು ಮುಖ್ಯಮಂತ್ರಿ ಬೊಮ್ಮಾಯಿಯವರು ಮೂಕ ಬಸವಣ್ಣನಾಗಿದ್ದಾರೆ ಎಂದು ಟೀಕಿಸಿದರು.

ಇಂತಹ ತಂಟೆಕೋರರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಇಡೀ ಪೊಲೀಸ್ ಇಲಾಖೆ ನೈತಿಕವಾಗಿ ಕುಸಿದುಹೋಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕಗಳಿಗಳಿಂದಾಗಿ ಹೊರರಾಜ್ಯ ಮತ್ತು ಹೊರದೇಶಗಳ ಎದುರು  ಶಾಂತಿ ಮತ್ತು ಸೌಹಾರ್ದ ಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.