ಬೆಂಗಳೂರು: ಶೋಭಾಯಾತ್ರೆ ಮಾಡುವಾಗ ಶಾಂತಿ ಭಂಗಕ್ಕೆ ಅವಕಾಶ ಕೊಡಬಾರದು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾ ಮನವಿ ಮಾಡಿದ್ದಾರೆ.
ರಾಮನ ಹೆಸರಿನಲ್ಲಿ ಶೋಭಾಯಾತ್ರೆ ನಡೆಸಲು ನನ್ನದೇನೂ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲ ಇದೆ ಎಂದು ಎಚ್ ಡಿ ಕೆ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶವನ್ನೂ ಕೊಡಬಾರದು ಎಂದು ಹೇಳಿದ್ದಾರೆ.
ಶೋಭಾಯಾತ್ರೆಯನ್ನು ಹಿಂದುಗಳು ವಾಸ ಮಾಡುವ ಬಡಾವಣೆ, ಬೀದಿಗಳಲ್ಲಿ ಮಾಡಲಿ ಅಲ್ಲೆಲ್ಲ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಲಿ ಇದಕ್ಕೆ ನನ್ನ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಶೋಭಾಯಾತ್ರೆ ಹೆಸರಿನಲ್ಲಿ ಇನ್ನೊಂದು ಸಮುದಾಯ ವಾಸ ಮಾಡುವ ಬೀದಿಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್ ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಸರಿಯಲ್ಲ, ಇದರಿಂದ ಶಾಂತಿ ಕದಡುತ್ತದೆ ಎಂದಿದ್ದಾರೆ.
ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ, ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯಬೆಳಕು ತೋರಿದ ನಮ್ಮೊಳಗಿನ ದೈವ. ರಾಮರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸೋಣ. ಆದರೆ, ನಮ್ಮ ರಾಮಸ್ಮರಣೆ ಇನ್ನೊಬ್ಬರಿಗೆ ನೋವುಂಟು ಮಾಡದಂತೆ ಎಚ್ಚರ ವಹಿಸೋಣ ಎಂಬ ಸಲಹೆ ಮಾಡಿದ್ದಾರೆ.

