ಹಾಲಿನ ದರದಲ್ಲಿ ಬದಲಾವಣೆ ಇಲ್ಲ -ಎಸ್.ಟಿ.ಸೋಮಶೇಖರ್

ಮೈಸೂರು: ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ‌‌‌‌ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು,ಆಯಾ ಹಾಲು ಒಕ್ಕೂಟದವರು ಲಾಭಾಂಶದಲ್ಲಿ ರೈತರಿಗೆ ಹೆಚ್ಚಿನ ಹಣ ಕೊಡಬಹುದು.ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದರು.

ಚಂದ್ರು ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಗೃಹ ಮಂತ್ರಿಗಳು ಸಮರ್ಥರಿದ್ದಾರೆ. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಬೇಕೆಂದು ಹೇಳಿದ್ದಾರೆ. ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಯಾವುದಾದರೂಂದು ಕಾರ್ಯಕ್ರಮ ಮಾಡುತ್ತಿದೆ. ನಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ  ಎಂದು ಟೀಕಿಸಿದರು.

ಬಿಜೆಪಿ ಸಂಘಟನಾ ಯಾತ್ರೆ ಕುರಿತು ಮೈಸೂರು ಜಿಲ್ಲಾಧ್ಯಕ್ಷರು ಈಗಾಗಲೇ ಸಭೆ ಮಾಡಿದ್ದಾರೆ. ಮಂಗಳವಾರದಿಂದ ಕೋರ್ ಕಮಿಟಿ ಸಭೆ ನಡೆಯಲಿದೆ.

ಏ.12,13ರಂದು ಪಕ್ಷದ ಆದೇಶದಂತೆ ಕಾರ್ಯಕ್ರಮ ನಡೆಯಲಿದೆ. ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.

ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದ ಪ್ರತಾಪ್ ಸಿಂಹ ಅವರು ಆಹ್ವಾನಿಸಿದ್ದಾರೆ.

ಮೈಸೂರಿನಲ್ಲಿ ಹೆಚ್ಚು ಯೋಗ ಕಾರ್ಯಕ್ರಮಗಳು ನಡೆಯುವುದರಿಂದ ಪ್ರಧಾನಿಗಳ ಆಗಮನ ಸಂತೋಷದ ವಿಚಾರ. ಮೈಸೂರು ಜನತೆ ಪರವಾಗಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದು ಸೋಮಶೇಖರ್ ತಿಳಿಸಿದರು.