ಜೆಡಿಎಸ್ ಗೇ ಈ ಬಾರಿ ಬಹುಮತ -ಕುಮಾರಸ್ವಾಮಿ ವಿಶ್ವಾಸ

ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜ್ಯತ್ಯಾತೀತ ಜನತಾದಳಕ್ಕೆ ಬಹುಮತ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಜಲಧಾರೆ ವಾಹನಕ್ಕೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಸ್ವತಂತ್ರ ಸರ್ಕಾರ ತರುವುದೇ ನಮ್ಮ ಗುರಿಯಾಗಿದ್ದು ಆ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಹೇಳಿದರು.

ರಾಜ್ಯದ ವಿವಿಧ ನದಿಗಳ ನೀರು ಸಂಗ್ರಹಿಸಿ ಕಳಸದಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ರಾಜ್ಯದ 180 ತಾಲೂಕಿನಲ್ಲಿ ಜಲಧಾರೆ ವಾಹನ ಪ್ರವಾಸ ಮಾಡಲಿದೆ. ನಾಡಿನ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮಾಡಿರುವ ದ್ರೋಹದ ಬಗ್ಗೆ ರಾಜ್ಯದ ಜನತೆಗೆ ಮನವರಿಕೆ ಮಾಡಲಾಗುತ್ತದೆ ಎಂದು ಎಚ್ ಡಿ ಕೆ ಹೇಳಿದರು. 

ಜೆಡಿಎಸ್‍ಗೆ ಸಂಪೂರ್ಣ ಅಧಿಕಾರ ನೀಡಿ. ಐದು ವರ್ಷದಲ್ಲಿ ನಾಡಿನ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ. ಇಲ್ಲವಾದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ  ಬೇಸತ್ತಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ.

ಹಿಂದೆ ಕೇವಲ 2-3 ಸ್ಥಾನ ಪಡೆಯುತ್ತಿದ್ದ ಪಕ್ಷಗಳು ಈಗ ಅಧಿಕಾರ ಹಿಡಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾವು 120 ಸ್ಥಾನ ಪಡೆಯುವುದು ಕಷ್ಟವೇ‌ ಅಲ್ಲ ಎಂದು ಹೇಳಿದರು.

ಜೆಡಿಎಸ್ ಪಕ್ಷದಿಂದ ಹೊರ ಹೋಗಿರುವವರು ಬರುತ್ತಾರೆ. ಪ್ರಾಯಶ್ಚಿತ್ತ ಪಟ್ಟು ವಾಪಸ್ ಪಕ್ಷಕ್ಕೆ ಬರುವವರು ಇದ್ದಾರೆ. ಇನ್ನು ಕೆಲವರು ಅಧಿಕಾರದ ಆಸೆಗೆ ಬರುತ್ತಾರೆ. ಇಂತಹವರ ವಿಚಾರದಲ್ಲಿ ಎಚ್ಚರಿಕೆಯಿಂದ ಇರುತ್ತೇವೆ ಎಂದು ತಿಳಿಸಿದರು.

ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 30 ಅಥವಾ 40 ಸ್ಥಾನಕ್ಕಾಗಿ ಹೋರಾಟ ಅಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕಾಗಿ ಹೋರಾಟ. ನಮ್ಮದು ವಿಚಾರಾಧಾರಿತವಾದ ಹೋರಾಟವಾಗಿದೆ ಎಂದು ಹೇಳಿದರು.

ನಾವು ಧರ್ಮ ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ ಎಂದರು.

ಜನತಾ ಜಲಧಾರೆ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪರ್ಯಾಯವಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕಲ್ಲಂಗಡಿ ಒಡೆದಾಗ ತೋರಿದ ಅನುಕಂಪ ತಲೆ ಒಡೆದಾಗಲೂ ತೋರಿಸಬೇಕಿತ್ತು ಎಂದಿರುವ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಿಮ್ಮ ಮಾತಿನ ಅರ್ಥ ಏನು ರಾಜ್ಯದಲ್ಲಿ ತಲೆ ಒಡೆಯುತ್ತಾ ಇರುತ್ತೇವೆ ಅಂತಾನಾ, ನೀವು ತಲೆ ಒಡೆಯುತ್ತೀರಿ, ನಾವು ಸಾಂತ್ವನ ಹೇಳಬೇಕು ಅನ್ನೋದಾ ಎಂದು ಖಾರವಾಗಿ ಪ್ರಶ್ನಿಸಿದರು.

ನನ್ನದು ಮಾತಲ್ಲ, ಕೆಲಸ ಮುಖ್ಯ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ ಅವರು  ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ? ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ. ಯಾವ ಕಾರಣಕ್ಕೆ ತಲವಾರ್ ಹಂಚಿದ್ದಾರೆ ? ಅವರನ್ನು ನೀವು ಅರೆಸ್ಟ್ ಮಾಡಿದ್ದೀರಾ  ಮೌನಿ ಬಸವರಾಜ ಬೊಮ್ಮಾಯಿ ಅವರೇ  ಎಂದು ಪ್ರಶ್ನಿಸಿದರು.

ರಾಯಚೂರಿನಲ್ಲಿ ಲವ್ ಕೇಸರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾವುದೇ ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ. ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು. ಅವರು ಯಾವ ಧರ್ಮದವರೇ ಆಗಿರಲಿ. ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರಿಗೆ ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ.

ನಿರ್ಬಂಧ ತೆರವು ಮಾಡಿಸಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿಲ್ಲೆ ಮಾತ್ರ ಅಲ್ಲ ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತದೆ ಎಂದು  ಎಚ್ ಡಿ ಕೆ ತಿಳಿಸಿದರು.