ಬೆಂಗಳೂರು: ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಮಗೆ ಜಾರಿಯಾಗಿರುವ ಸಮನ್ಸ್ ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ವಿಶೇಷ ಮೇಲ್ಮನವಿ ಸಲ್ಲಿಸಿರುವ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎಲ್ಲ ಪ್ರಕ್ರಿಯೆಗೆ ತಡೆ ನೀಡುವಂತೆ ಹಾಗೂ ಆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿದ್ದಾರೆ.
ವಿಶೇಷ ನ್ಯಾಯಾಲಯ ಏ.19ರಂದು ಖುದ್ದು ಹಾಜರಾಗುವಂತೆ ಹೊರಡಿಸಿರುವ ಸಮನ್ಸ್ ಕೂಡ ರದ್ದು ಮಾಡಬೇಕು ಎಂದು ಬಿಎಸ್ ವೈ ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಈಗಾಗಲೇ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧದ ಆರೋಪಗಳನ್ನು ಮುಕ್ತಗೊಳಿಸಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆ ಅಂಶ ಪರಿಗಣಿಸಿಲ್ಲ ಎಂಬುದು ಬಿಎಸ್ ಯಡಿಯೂರಪ್ಪ ಅವರ ವಾದವಾಗಿದೆ.
ಡಿನೋಟಿಫಿಕೇಷನ್ ಮಾಡಿದ ಆರೋಪ ಸಂಬಂಧ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಏಪ್ರಿಲ್ 19ರಂದು ಖುದ್ದು ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಐ.ಟಿ. ಕಾರಿಡಾರ್ ನಿರ್ಮಾಣಕ್ಕಾಗಿ ಸ್ವಾದೀನಪಡಿಸಿಕೊಂಡಿದ್ದ ಭೂಮಿಯ ಪೈಕಿ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಬಿಎಸ್‍ವೈ ಮೇಲಿದೆ.
ಈ ಪ್ರಕರಣದಲ್ಲಿ ಮೂಲ ದೂರುದಾರರಾದ ವಾಸುದೇವ ರೆಡ್ಡಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.

