ವಿಜಯಪುರ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಮುಕ್ತಾಯಗೊಂಡಿದ್ದು ಮೇ ಎರಡನೆ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಪರೀಕ್ಷೆ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆಯಿತು. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಅಕ್ರಮ ವರದಿಯಾಗಿದೆ ಎಂದು ಹೇಳಿದರು.
ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಏ.12 ರಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಆರಂಭವಾಗಿವೆ.
ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುತ್ತದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಇದೆ. ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಸಚಿವರು ತಿಳಿಸಿದರು
ಸಮವಸ್ತ್ರ ವಿಚಾರವಾಗಿ ಶಾಲೆಗಳಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪರೀಕ್ಷೆಯ ಅವಧಿಯಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ ಎಂದು ಸಚಿವ ನಾಗೇಶ್ ತಿಳಿಸಿದರು .

