ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ

ಬೆಳಗಾವಿ: ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ ಪಾಟೀಲ್  ಉಡುಪಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಸಾವಿಗೆ ಕೆ.ಎಸ್‌‌.ಈಶ್ವರಪ್ಪ ಕಾರಣ ಎಂದು ಮಾಧ್ಯಮ ಪ್ರತಿನಿಧಿಗಳ ಮೊಬೈಲ್‌ಗೆ ಡೆತ್‌ನೋಟ್ ವಾಟ್ಸಪ್ ಮೆಸೇಜ್ ಕಳಿಸಿ ಸಂತೋಷ ಪಾಟೀಲ ನಾಪತ್ತೆಯಾಗಿದ್ದರು.

ಇದೀಗ ಅವರು ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ  ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದ್ದು ಹಲವು ಅನುಮಾನಗಳನ್ನು ‌ಹುಟ್ಟುಹಾಕಿದೆ.

ಡೆತ್‌ನೋಟ್ ಮೆಸೇಜ್ ಮಾಹಿತಿ ಬೆನ್ನಲ್ಲೇ ಸಂತೋಷ ಪಾಟೀಲ್ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ನಡೆಸಿದ್ದರು.

ಸಂತೋಷ ಪಾಟೀಲ್ ಮೊಬೈಲ್ ಉಡುಪಿಯಲ್ಲಿ ಆ್ಯಕ್ಟೀವ್ ಎಂಬ ಮಾಹಿತಿ ಸಿಕ್ಕಿತ್ತು.ಬೆಳಗಾವಿಯ ಸಂತೋಷ ಪಾಟೀಲ್ ನಿವಾಸಕ್ಕೆ ಲಾಕ್ ಹಾಕಲಾಗಿತ್ತು.

ಒಂದು ವಾರದಿಂದ ಮನೆಗೆ ಬೀಗ ಹಾಕಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

ಸಚಿವ ಈಶ್ವರಪ್ಪ ತಾವು ಮಾಡಿದ 108 ಕಾಮಗಾರಿ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪಿಸಿ ಸಂತೋಷ ಪಾಟೀಲ್ ರಾಜ್ಯದ ಗಮನ ಸೆಳೆದಿದ್ದರು.

ಈ ಸಂಬಂಧ ಪ್ರಧಾನಿ ಮೋದಿಗೂ ಅವರಿಗೂ ಸಂತೋಷ ಪಾಟೀಲ್  ಪತ್ರ ಬರೆದಿದ್ದರು.