ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲು ಡಿಕೆಶಿ ಆಗ್ರಹ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ತನ್ನ ಸಾವಿಗೆ ಕಾರಣ ಯಾರು ಎಂಬುದನ್ನು ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಕೂಡಲೇ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ‌ಆಗ್ರಹಿಸಿದರು.

ಆರೋಪಿ ಸಚಿವ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು.

ಈ ಶೇ.40ರ ಕಮಿಷನ್ ಆರೋಪ ಮಾಡಿರುವುದು ನಾವ್ಯಾರೂ ಅಲ್ಲ. ಗುತ್ತಿಗೆದಾರರ ಸಂಘ, ಗುತ್ತಿಗೆದಾರರು ಹಾಗೂ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಈ ಆರೋಪ ಮಾಡಿದ್ದಾರೆ

ಎಂದು ಡಿಕೆಶಿ ಹೇಳಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಯಾರ ರಕ್ಷಣೆಯನ್ನೂ ಮಾಡಬಾರದು ಎಂದು ಹೇಳಿದರು.

ಕೇವಲ ಮೌಖಿಕವಾಗಿ ತನಿಖೆ ಮಾಡುತ್ತೇವೆ, ಸತ್ಯಾಂಶ ತಿಳಿಯುತ್ತೇವೆ ಎಂದು ಸಿಎಂ ಕಾಲಹರಣ ಮಾಡಬಾರದು. ಕೂಡಲೇ ಎಫ್ಐಆರ್ ದಾಖಲಿಸಿ, ಈಶ್ವರಪ್ಪನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸಚಿವರುಗಳ ವಿರುದ್ಧದ ಪ್ರಕರಣದಲ್ಲಿ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಬಿ ರಿಪೋರ್ಟ್ ಹಾಕಿ ರಕ್ಷಣೆ ಮಾಡಿದೆ, ಈ ಪ್ರಕರಣದಲ್ಲಿ ಆ ರೀತಿ ಮಾಡಬಾರದು.

ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಅನೇಕ ಸಚಿವರುಗಳ ರಾಜೀನಾಮೆ ಪಡೆಯಲಾಗಿದೆ. ಈಗಲೂ ಆರೋಪ ಹೊತ್ತಿರುವ ಈಶ್ವರಪ್ಪ ವಿರುದ್ದ ಪ್ರಕರಣ ದಾಖಲಿಸಿ, ಆತನನ್ನು ವಜಾಗೊಳಿಸಬೇಕು, ಬಂಧಿಸಬೇಕು ಎಂದು ಆಗ್ರಹಿಸಿದರು.

ಇದು ಕೇವಲ ಆತ್ಮಹತ್ಯೆ ಪ್ರಕರಣವಲ್ಲ. ಇದೊಂದು ಕೊಲೆ ಪ್ರಕರಣ. ಈ ಸಾವಿಗೆ ಕಾರಣ ಯಾರು ಎಂದು ಬರೆದಿಟ್ಟು ಸಂತೋಷ್ ಸಾವಿಗೆ ಶರಣಾಗಿದ್ದಾರೆ. ಈ ಸಾವಿಗೆ ಕಾರಣ ಏನು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನನ್ನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದಷ್ಟೇ ಈಗ ಉಳಿದಿರುವ ವಿಚಾರ ಎಂದು ಡಿಕೆಶಿ ಹೇಳಿದರು.