ಬೆಂಗಳೂರು: ಸಚಿವ ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಗುರಿ ಮಾಡುತ್ತಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ದೂರಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ತನಿಖೆ ನಂತರ ಹೊರಬರಲಿದೆ. ಸದ್ಯಕ್ಕೆ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಎಂಬುದು ನಮ್ಮ ಸರ್ಕಾರ ಬಂದ ಮೇಲೆ ಪ್ರಾರಂಭವಾಗಿಲ್ಲ. ಕಾಂಗ್ರೆಸ್‍ನವರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ. ತನಿಖೆಯ ನಂತರವೇ ಸತ್ಯಾಂಶ ಗೊತ್ತಾಗಲಿದೆ. ಡಿವೈಎಸ್ಪಿ ಗಣಪತಿ ವಿಚಾರವೇ ಬೇರೆ, ಸಂತೋಷ್ ವಿಚಾರವೇ ಬೇರೆ. ವಾಟ್ಸಪ್ ಸಂದೇಶ ಎಲ್ಲಿಂದ ಬಂದಿದೆ ಎಂಬುದು ಮುಖ್ಯವಾಗಲಿದೆ ಎಂದರು.
ಅನಾಮಧೇಯ ಪತ್ರಕ್ಕೆ ಆಧಾರವಿಲ್ಲ. ಆಧಾರರಹಿತ ದೂರಿಗೆ ದಾಖಲೆ ಏನಿದೆ ಇಂತಹ ದೂರಿಗೆ ಒಬ್ಬರನ್ನು ಗುರಿ ಮಾಡುವುದು ಸರಿಯಲ್ಲ.
ಬಿಜೆಪಿಯ ಒಳ್ಳೆಯ ಕೆಲಸಗಳಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಭ್ರಷ್ಟಾಚಾರದ ಜನಕವೇ ಕಾಂಗ್ರೆಸ್. ಆದರೆ ಭ್ರಷ್ಟಾಚಾರ ರಹಿತ ಆಡಳಿತ ಕೊಡುವ ಉದ್ದೇಶ ಬಿಜೆಪಿ ಹೊಂದಿದೆ ಎಂದು ಸುಧಾಕರ್ ತಿಳಿಸಿದರು.

