ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಿ; ಕಾಂಗ್ರೆಸ್ ಗೆ ಸಿಎಂ ಸಲಹೆ

ಹುಬ್ಬಳ್ಳಿ: ಕಾಂಗ್ರೆಸ್ ನವರು  ವಕೀಲರು ಹಾಗೂ ನ್ಯಾಯಮೂರ್ತಿಗಳಾಗುವ ಅವಶ್ಯಕತೆ ಇಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ‌ ಪ್ರತಿ‌ ‌‌ನಿಧಿಗಳೊಂದಿಗೆ ಸಿಎಂ ಮಾತನಾಡಿದರು.

ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ‌ನವರು ಒತ್ತಾಯ‌ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಪೊಲೀಸರಿಗೆ ತಮ್ಮ ಕೆಲಸ ಮಾಡಲು ಬಿಡಬೇಕು‌ ಎಂದು ಹೇಳಿದರು.

ಪೊಲೀಸ್ ಆಗಲಿ ಸಿಬಿಐ ಆಗಲಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ  ಕೆ.ಜೆ.ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಏನು ಅವಶ್ಯಕತೆ ಇದೆ ಅಥವಾ‌ ಇಲ್ಲ ಎನ್ನುವುದನ್ನು ಪೊಲೀಸರು ತೀರ್ಮಾನ ಮಾಡುತ್ತಾರೆ.  ಕಾಂಗ್ರೆಸ್ ನವರು ಯಾಕೆ ಗಾಬರಿಯಾಗುತ್ತಿದ್ದಾರೆ‌ ಎಂದು ‌ಪ್ರಶ್ನಿಸಿದರು.

ಈಶ್ವರಪ್ಪ ಅವರ ರಾಜೀನಾಮೆ ಘೋಷಣೆಯಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆಯೆ, ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ ಈಶ್ವರಪ್ಪ ಅವರಿಗೆ ತಾವು ಆರೋಪ ಮುಕ್ತರಾಗುವ ಬಗ್ಗೆ  ವಿಶ್ವಾಸ ಇದೆ.ಯಾರದೇ ವೈಯಕ್ತಿಕ ವಿಚಾರವಿಲ್ಲ.ಇಲ್ಲಿ ಹಿನ್ನಡೆ, ಮುನ್ನಡೆ ಪ್ರಶ್ನೆ ಬರುವುದಿಲ್ಲ ಎಂದು ಉತ್ತರಿಸಿದರು.

ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡಲಿದ್ದಾರೆ. ತಮ್ಮ ನಿಲುವಿನ ಬಗ್ಗೆ ಅವರಿಗೆ  ಸ್ಪಷ್ಟತೆ ಇದೆ ಎಂದರು.

ಪ್ರಕರಣ ಒಂದು ಷಡ್ಯಂತ್ರವೇ ಎಂಬ ಪ್ರಶ್ನೆಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ,  ಸತ್ಯಾಂಶ ಹೊರಬೀಳಲಿದೆ ಎಂದು ಸಿಎಂ ತಿಳಿಸಿದರು.