ವಿಜಯಪುರ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ನಾಯಕರು ಮಾತ್ರವಲ್ಲ ಬಿಜೆಪಿಯ ಒಬ್ಬ ಮುಖ್ಯಸ್ಥರ ಕೈವಾಡವೂ ಇದೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಯತ್ನಾಳ್, ಈ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯ ಒಬ್ಬರು ನಾಯಕರು ಇಂಥ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಸಿಡಿ ಮಾಡಿಸುವುದು, ಬ್ಲ್ಯಾಕ್‍ಮೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ ಸಮಯ ಬಂದಾಗ ಅವರ ಹೆಸರು ಬಹಿರಂಗಗೊಳಿಸುತ್ತೇನೆ ಎಂದು ಹೇಳಿದರು.
ಕರ್ನಾಟಕದಲ್ಲಿ ಎರಡು ಕಾರ್ಖಾನೆಗಳಿವೆ. ಇದರ ನಾಯಕರು ಒಬ್ಬರು ಬಿಜೆಪಿ ಇನ್ನೊಬ್ಬರು ಕಾಂಗ್ರೆಸ್‍ನವರಾಗಿದ್ದಾರೆ. ಸಿಡಿ ಮಾಡುವುದು, ಎಡಿಟ್ ಮಾಡುವುದು ಅವರ ಕೆಲಸವಾಗಿದೆ. ಈ ಇಬ್ಬರು ಮಹಾನ್ ಕಳ್ಳರು, ಇದೇ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
ಕರ್ನಾಟಕದಲ್ಲಿ ಸುಸಂಸ್ಕೃತ ರಾಜಕಾರಣ ಇದೆ. ಕೆಲವರಿಂದ ಇದು ಹಾಳಾಗುತ್ತಿದೆ. ರಾಜ್ಯದಲ್ಲಿ ದೇವರಾಜ ಅರಸು ಅವರಂತಹ ಎಂತೆಂಥ ರಾಜಕಾರಣಿಗಳು ಇದ್ದರು. ಆದರೆ ಈಗ ಬ್ಲ್ಯಾಕ್‍ಮೇಲ್ ರಾಜಕಾರಣ ನಡೆಯುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಹಗರಣ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಹಿಂದೆ ಒಂದೇ ತಂಡವಿದೆ. ಮಹಾನಾಯಕರೊಬ್ಬರ ಕೈವಾಡವಿದೆ ಎಂದು ಹೇಳಿದ್ದಾರೆ. ಅವರ ಹೆಸರು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಅವರಿಗೆ ಕಾಮಗಾರಿ ನಡೆಸಲು ಯಾವುದೇ ವರ್ಕ್ ಆರ್ಡರ್ ನೀಡಿರಲಿಲ್ಲ.
ಇಷ್ಟಾದರೂ 5 ಕೋಟಿ ರೂ. ಕಾಮಗಾರಿ ಹೇಗೆ ಮಾಡಿದರು. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರ ಅದು. ಅವರ ಗಮನಕ್ಕೆ ಬಾರದೆ 108 ಕಾಮಗಾರಿ ಹೇಗೆ ನಡೆದವು ಎನ್ನುವ ಹಲವು ಪ್ರಶ್ನೆ ಉದ್ಭವವಾಗಿವೆ. ಕಾಂಗ್ರೆಸ್ ನಾಯಕರನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದರು.

