ಬೆಂಗಳೂರು: ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಇರುವ ಆ ಮಹಾನ್ ನಾಯಕ ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು ಹುಷಾರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ಮಹಾನ್ ನಾಯಕ ನಿಮ್ಮ ಬೆನ್ನಿಗೆ ಚೂರಿ ಇರಿಯುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಅಧಿಕಾರದ ಹಪಾಹಪಿಗೆ ಬಿದ್ದಿರುವ ಬಂಡೆ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ.
ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರಳಾದರೂ ಅಚ್ಚರಿಯಿಲ್ಲ.ಬೇಗ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವು ಪ್ರಬಲ ಸ್ಪರ್ಧೆಯಾಗಬಹುದು.ಅದಕ್ಕಾಗಿ ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು.
ಅಧಿಕಾರಕ್ಕಾಗಿ ಏನಾದರು ಮಾಡದೆ ಬಿಡುವವರಲ್ಲ, ಸ್ವಯಂಘೋಷಿತ ಡೈನಾಮಿಕ್ ಬಂಡೆ ಎಂದು ತಿಳಿಸಿದ್ದಾರೆ.
ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು ವ್ಯವಸ್ಥಿತ ಜಾಲ ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ.
ಹಗಲು ಕಂಡು ಇರುಳಿನಲ್ಲಿ ಬಾವಿಗೆ ಬೀಳಬೇಡಿ,ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ತಮ್ಮದು ಎಂಬುದನ್ನು ಬಂಡೆಯ ಇತಿಹಾಸವೇ ಹೇಳುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಅಂದಿನ ಗೃಹ ಸಚಿವ ಕೆ.ಜೆ.ಜಾಜ್‍ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸೂಚನೆ ಅನುಮತಿ ಕೊಟ್ಟಿದ್ದರೆ ಆಹೋರಾತ್ರಿ ನಾಟಕದ ಧರಣಿಗೆ ಅರ್ಥ ಬರುತ್ತಿತ್ತು ಅಲ್ಲವೇ ಕೆಪಿಸಿಸಿ ಅಧ್ಯಕ್ಷರೆ ಪ್ರಶ್ನಿಸಿದ್ದಾರೆ.
ಕೆ.ಜೆ.ಜಾರ್ಜ್ ವಿರುದ್ದವೂ ಐಪಿಸಿ ಸೆಕ್ಷನ್ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಮೇಲೆಯೇ ದೂರು ದಾಖಲಾಗಿತ್ತು. ಆವಾಗ ಪೊಲೀಸರು ಏಕೆ ಬಂಧನ ಮಾಡಿರಲಿಲ್ಲ ಎಂದು ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾರ್ಜ್ ಅವರು ಆರೋಪಿ ಸ್ಥಾನದಲ್ಲಿ ಇದ್ದಾಗ ಸಿಬಿಐ ಅವರನ್ನು ಬಂಧಿಸಿತ್ತೇ?
ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಎಫ್‍ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಆದೇಶ ಕೊಟ್ಟ ನಂತರವೇ ಎಂಬುದನ್ನು ಸಿದ್ದರಾಮಯ್ಯನವರು ಜನತೆಯ ಮುಂದೆ ಬಾಯಿಬಿಡಲಿ ಎಂದು ಒತ್ತಾಯಿಸಿದ್ದಾರೆ.

