ಬಾಗಲಕೋಟೆ: ನನ್ನ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎನ್ನುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆ ಏಕೆ ಬೆಂಬಲ ನೀಡಲಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ಹ್ಯಾಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ನಿಮ್ಮದೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್ ಗೆ ನೀವು ಸಹಕಾರ ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಾರಿದರು.
ನಿಮ್ಮ ಕ್ಷೇತ್ರದಲ್ಲಿ ಕೆಲಸ ಆಗಿದ್ದಾಗ ನೀವೇ ಅವರನ್ನ ಸಂತೋಷ್ ಅವರನ್ನ ಕರೆದುಕೊಂಡು ಹೋಗಿ ಬಿಲ್ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು ಎಂದು ಚಾಟಿ ಬೀಸಿದರು.
ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಿಮ್ಮ ಗಮನಕ್ಕೆ ಬಂದ ಕೂಡಲೇ ಹಣ ಬಿಡುಗಡೆ ಮಾಡಿಕೊಡುವ ಕೆಲಸವನ್ನು ಮಾಡಬೇಕಿತ್ತು. ಸಂತೋಷ್ ಪಾಟೀಲ್ ಕಷ್ಟದಲ್ಲಿ ಇರುವುದು ನಿಮಗೆ ಗೊತ್ತಿತ್ತು. ನೀವು ಏಕೆ ಸಹಾಯ ಮಾಡಿಲ್ಲ ಎಂದು ನಿರಾಣಿ ಪ್ರಶ್ನಿಸಿದರು.
ಸಾವಿರಾರು ಕೋಟಿ ತರುವ ನಿಮಗೆ ನಾಲ್ಕು ಕೋಟಿ ರೂಪಾಯಿ ಹೊರೆಯಾಗುತ್ತಿರಲಿಲ್ಲ. ನಾಲ್ಕು ಕೋಟಿ ರೂಪಾಯಿ ಕೊಡಿಸಲು ಆಗದಿರುವ ನೀವು ಅದರ ನೈತಿಕ ಹೊಣೆಗಾರಿಕೆಯನ್ನು ಹೊರಬೇಕು ಎಂದು ಕಿಡಿಕಾರಿದರು.
ಪ್ರಕರಣ ಕುರಿತು ಈಗಾಗಲೇ ಎಫ್‍ಐಆರ್ ಆಗಿದೆ. ಆರೋಪಿ 1, 2, 3 ಎಂದು ಮಾಡಿದ್ದಾರೆ. ನಮ್ಮ ಪೊಲೀಸ್ ಇಲಾಖೆಯವರು ಶಕ್ತರಿದ್ದಾರೆ. ಬರುವ ದಿನದಲ್ಲಿ ಸತ್ಯ ಗೊತ್ತಾಗಲಿದೆ.ಸರಕಾರ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.
ಆರೋಪ ಮಾಡಿದ ತಕ್ಷಣ ಬಂಧಿಸಬೇಕು ಎಂಬುದು ಸರಿಯಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಸಚಿವ ಈಶ್ವರಪ್ಪ ತಾವಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಕೆ.ಎಸ್ ಈಶ್ವರಪ್ಪನವರ ಮೇಲೆ ಬಂದಿರುವ ಆಪಾದನೆ ಸತ್ಯಕ್ಕೆ ದೂರವಾದುದು. ಅವರ ಮೇಲೆ ಆಪಾದನೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸಚಿವ ಈಶ್ವರಪ್ಪ ತಪ್ಪು ಮಾಡಿದ್ದಾರೆ ಎಂದಾಗ ಇದೆಲ್ಲಾ ಸರಿ. ಆದರೆ ತಪ್ಪೇ ಮಾಡಿಲ್ಲ ಎಂದ ಮೇಲೆ ಪ್ರತಿಪಕ್ಷದವರ ಆಗ್ರಹ ಸರಿಯೇ ಎಂದು ನಿರಾಣಿ ಅಸಮಾಧಾನ ವ್ಯಕ್ತಪಡಿಸಿದರು.

