ಬೆಂಗಳೂರು: ಕಾಂಗ್ರೆಸ್ ನಮ್ಮ ಸರ್ಕಾರದ ಭ್ರಷ್ಟಾಚಾರದ ಯಾತ್ರೆ ನಡೆಸಿದರೆ ಅವರ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಜನತೆಯ ಮುಂದಿಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಸಿಎಂ ಮಾತನಾಡಿದರು.
ಮಹಾನ್ ಪರಿಶುದ್ಧರು, ಪರಮಪವಿತ್ರರು ಈಗ ನಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಜನತೆಯ ಮುಂದಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಯಾವ ಹಗರಣಗಳು ನಡೆದಿರಲಿಲ್ಲವೇ? ನಾವು ಕೂಡ ಅದನ್ನೆಲ್ಲ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‍ನವರಿಗೆ ಇಲ್ಲ. ಮಾಡಬಾರದ್ದನ್ನು ಮಾಡಿ ಈಗ ಅಧಿಕಾರ ಕಳೆದುಕೊಂಡು, ಇನ್ನೊಂದು ಸರ್ಕಾರದ ಬಗ್ಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ನಿಮ್ಮ ತಿಜೋರಿಯಲ್ಲಿ ಭ್ರಷ್ಟಾಚಾರದ ಎಷ್ಟು ಅಸ್ತಿಪಂಜರಗಳಿವೆ ಎಂಬುದನ್ನು ಮೊದಲು ನೋಡಿಕೊಳ್ಳಿ. ನೀವು ಪಾದಯಾತ್ರೆ ಹೊರಟ ತಕ್ಷಣ ಜನರೇನು ನಂಬಲು ಹುಚ್ಚರಲ್ಲ ಎಂದು ಖಾರವಾಗಿ ನುಡಿದರು.
ಅರ್ಕಾವತಿ ಹಗರಣದಿಂದ ಹಿಡಿದು, ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಷ್ಟು ಸ್ವಚ್ಛ ಆಡಳಿತ ಕೊಟ್ಟಿದ್ದರೆ ಜನರು ನಿಮ್ಮನ್ನು ಏಕೆ ತಿರಸ್ಕರಿಸುತ್ತಿದ್ದರು ಎಂದು ಪ್ರಶ್ನಿಸಿದರು.
ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್‍ನವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದೇ ಹಾಸ್ಯಾಸ್ಪದ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು ರಕ್ಷಿಸಲು ನೀವು ಮುಂದಾಗಿರಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಡೆತ್‍ನೋಟ್ ಬರೆದಿಟ್ಟು ವಿಡಿಯೋ ಕೂಡ ಮಾಡಿದ್ದರೂ ಜಾರ್ಜ್ ವಿರುದ್ಧ ಇದೇ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದೂ ಎಫ್‍ಐಆರ್ ಹಾಕಿರಲಿಲ್ಲ.
ಗಣಪತಿ ಕುಟುಂಬದವರು ನ್ಯಾಯಾಲಯಕ್ಕೆ ಹೋದ ನಂತರ ಅವರ ವಿರುದ್ಧ ದೂರು ದಾಖಲಿಸಿ ಎಫ್‍ಐಆರ್ ಹಾಕುವಂತೆ ಕೋರ್ಟ್ ನಿರ್ದೇಶನ ನೀಡಿದ ನಂತರ ದೂರು ದಾಖಲಿಸಲಾಯಿತು.
ಇವರೆಲ್ಲರೂ ಸೇರಿ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲು ಯತ್ನಿಸಿದ್ದರು. ಈಗ ನಮಗೆ ನೈತಿಕತೆ ಪಾಠ ಮಾಡುತ್ತಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಡೀ ಸಂಪುಟವೇ ಜಾರ್ಜ್ ಅವರನ್ನು ರಕ್ಷಿಸಲು ಹೊರಟಿತ್ತು. ಜಾರ್ಜ್ ಕೂಡಾ ಮೊದಲ ಆರೋಪಿಯಾಗಿದ್ದರು. ಹಾಗಾದರೆ ಅವರನ್ನು ಪೊಲೀಸರು ಬಂಧಿಸಿದ್ದರೆ, ಈಶ್ವರಪ್ಪನವರಿಗೊಂದು ನ್ಯಾಯ, ಜಾರ್ಜ್ ಅವರಿಗೊಂದು ನ್ಯಾಯವೇ ಎಂದು ಕಿಡಿಕಾರಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದ ಬಗ್ಗೆ ಈಗಾಗಲೇ ಪ್ರಾಥಮಿಕ ತನಿಖೆ ಆರಂಭವಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬರಬೇಕು.
ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಕೂಡ ವೈಜ್ಞಾನಿಕವಾಗಿ ತನಿಖೆಯನ್ನು ನಡೆಸಲಿದ್ದಾರೆ.
ಇದರ ಪ್ರಾಥಮಿಕ ವರದಿ ಬಂದ ಬಳಿಕ ತನಿಖಾಧಿಕಾರಿಗಳು ಯಾವ ಸೆಕ್ಷನ್‍ನಡಿ ದೂರು ದಾಖಲಿಸಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

