ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ಗಮನ ಬೇರೆಡೆ ಸೆಳೆಯಲು ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಹತ್ಯೆ ಮೂಲಕ ಕೋಮು ಗಲಭೆಗೆ ಸಂಚು ರೂಪಿಸಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಶಿವಮೊಗ್ಗದಲ್ಲಿ ಒಂದು ಟ್ರಸ್ಟ್ ಇದ್ದು, ಅದರಲ್ಲಿ ದೊಡ್ಡವರು ಸದಸ್ಯರಾಗಿದ್ದಾರೆ. ಆ ಟ್ರಸ್ಟ್ ಸದಸ್ಯರು ಹಾಗೂ ಬೆರೆಯವರೆಲ್ಲ ಸೇರಿ, ಕೊಲೆ ಸಂಚಿಗೆ ತಯಾರಿ ಮಾಡಿದ್ದಾರೆ. ಶಿವಮೊಗ್ಗ ಪೊಲೀಸರು ಬುದ್ಧಿವಂತಿಕೆ ಪ್ರದರ್ಶಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಪೊಲೀಸರು ಈ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ನಡೆಯುವ ಸಂಭವವಿತ್ತು. ಈ ಪ್ರಕರಣದ ಎಫ್ ಐ ಆರ್ ನನ್ನ ಬಳಿ ಇದೆ. ಟ್ರಸ್ಟ್ ಸದಸ್ಯನೂ ಆಗಿರುವ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾನೆ.
ಪೊಲೀಸ್ ಇಲಾಖೆ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿದ್ದು, ಆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ತಿಳಿಸಿದರು.
ಈ ಪ್ರಕರಣದ ತನಿಖೆ ಆದರೆ, ಆ ಟ್ರಸ್ಟ್ ಯಾವುದು, ಅದರಲ್ಲಿ ಯಾರೆಲ್ಲಾ ಪ್ರಭಾವಿಗಳು ಇದ್ದಾರೆ, ಕೊಲೆ ಸಂಚಿನಲ್ಲಿ ಅವರ ಪಾತ್ರ ಏನಿದೆ ಎಂಬುದು ಬಹಿರಂಗವಾಗಲಿದೆ ಎಂದರು.
ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಿಮ್ಮ ಕಡೆ ಕೈ ತೋರಿಸುವ ಪ್ರಯತ್ನವಾಗುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಅವರು ತೋರಿಸಲಿ, ಯಾರು ಬೇಡ ಎಂದರು. ನಾನು ಯಾವುದೇ ಕೆಲಸಕ್ಕೂ ಡಬಲ್ ಬಿಲ್ ಹಾಕಿ ಕೆಲಸ ಮಾಡಿಲ್ಲ. ಸಮಯ ಬಂದಾಗ ನಾನು ಮಾತನಾಡುತ್ತೇನೆ ಎಂದು ಶಿವಕುಮಾರ್ ಉತ್ತರಿಸಿದರು.

